ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಅನ್ನೋದು ಸಾಬೀತಾಗಿದೆ. ಕೆಲವರಂತೂ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ವರ್ಷಾನುಗಟ್ಟಲೆ ಮಾತ್ರೆಗಳ ಜೊತೆಗೇ ಜೀವನ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ಇಂದಿನ ಆಧುನಿಕ ಸಮಾಜದಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಸ್ಥಿರತೆಯಲ್ಲಿರಿಸುವುದು ಹೇಗೆ..? ಒತ್ತಡವನ್ನು ನಿಭಾಯಿಸುವುದು ಹೇಗೆ..? ಇದೆಲ್ಲದರ ಬಗ್ಗೆ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋ ವೈದ್ಯೆ ಡಾ | ಪೂನಂ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಈ ಬಗೆಗಿನ ವರದಿ ಇಲ್ಲಿದೆ ಓದಿ.
ಇತ್ತೀಚಿನ ದಿನಗಳಲ್ಲಿ ಕೆಲವೊಮ್ಮೆ ನಾವು ಭಯಭೀತರಾಗುವ ಅಥವಾ ಅಸಹಾಯಕರಾಗುವ ಪರಿಸ್ಥಿತಿಯಲ್ಲಿರಬಹುದು. ಆದರೆ ನಮ್ಮ ಮನಸ್ಸನ್ನು ನಿಯಂತ್ರಿಸುವ ಶಕ್ತಿ ನಮಗಿದೆ. ನಾವು ನಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಂಡಿತವಾಗಿಯು ಕಾಪಾಡಿಕೊಳ್ಳಬಹುದು. ಒತ್ತಡವನ್ನು ನಿಭಾಯಿಸಲು ನೀವು ಮಾಡಬಹುದಾದ ಕೆಲವು ಆಭ್ಯಾಸಗಳು ಇಲ್ಲಿವೆ ನೋಡಿ.
1) ಚಟುವಟಿಕೆಯಿಂದ ಇರುವುದರ ಮೂಲಕ ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಕನಿಷ್ಠ 30 ನಿಮಿಷಗಳ ವ್ಯಾಯಾಮ, ಧ್ಯಾನ ಅಥವಾ ಯೋಗ ಮಾಡಿ.
2) ನಿದ್ರೆಗೆ ಆದ್ಯತೆ ನೀಡಿ ಮತ್ತು ನಿಮ್ಮ ಒತ್ತಡದ ವೇಳಾಪಟ್ಟಿಯ ಹೊರತಾಗಿಯೂ ಸ್ಥಿರವಾದ ಮಲಗುವ ಸಮಯವನ್ನು ಕಾಪಾಡಿಕೊಳ್ಳಿ. ಉತ್ತಮವಾದ ನಿದ್ರೆಯನ್ನು ಮಾಡುವುದರ ಮೂಲಕ ರಿಫ್ರೆಶ್ ಆಗಿರಿ.
3) ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ನಿಮ್ಮ ಮನಸ್ಸನ್ನು ಆರೋಗ್ಯವಾಗಿಡಲು, ಸಕ್ಕರೆ ಮತ್ತು ಕೊಬ್ಬಿನ ಸೇವನೆಯನ್ನು ಮಿತಗೊಳಿಸಿ.
4) ಖುಷಿ ನೀಡುವ ಕೆಲಸಗಳಲ್ಲಿ ನಿರತರಾಗುವುದು. ನಿಮಗಾಗಿ ಅಥವಾ ಪ್ರೀತಿಪಾತ್ರರಿಗಾಗಿ ಅಡುಗೆ ಮಾಡುವುದು, ನಿಮ್ಮ ಸಾಕುಪ್ರಾಣಿಗಳೊಂದಿಗೆ ಆಟವಾಡುವುದು, ಉದ್ಯಾನವನದಲ್ಲಿ ನಡೆಯುವುದು, ಪುಸ್ತಕವನ್ನು ಓದುವುದು ಅಥವಾ ಚಲನಚಿತ್ರ ಅಥವಾ ಟಿವಿ ಸರಣಿಯನ್ನು ವೀಕ್ಷಿಸುವಂತಹ ನಿಮಗೆ ಅರ್ಥಪೂರ್ಣ ಮತ್ತು ಆನಂದದಾಯಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
5) ನಿಗದಿತ ಸಮಯದೊಂದಿಗೆ ನಿಯಮಿತ ದಿನಚರಿಯನ್ನು ಹೊಂದಿರಿ.
6) ಕೆಲವು ನಿಮಿಷಗಳನ್ನು ಸ್ವಯಂಚಿಂತನೆಗೆ ಮೀಸಲಿಡಿ. ನಿಮ್ಮ ದೇಹ ,ಅಲೋಚನೆಗಳು ಸೇರಿದಂತೆ ಪ್ರಸ್ತುತ ಚಲನವಲನಗಳ ಬಗ್ಗೆ ಗಮನವಿರಲಿ.
7) ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಿ.
8) ನೀವು ನಂಬುವ ಯಾರೊಂದಿಗಾದರೂ ಮಾತನಾಡುವುದು, ಸ್ನೇಹಿತರು, ಕುಟುಂಬದ ಸದಸ್ಯರು ಅಥವಾ ಸಹೋದ್ಯೋಗಿಯಾಗಿರಲಿ, ಪ್ರಯೋಜನಕಾರಿಯಾಗಬಹುದು. ನಿಮ್ಮ ಬಗ್ಗೆ ಕಾಳಜಿವಹಿಸುವ ಯಾರೊಂದಿಗಾದರೂ ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಾಧ್ಯವಾದರೆ ಉತ್ತಮ.
9) ಹೊಸ ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
10) ದಯೆಯಿಂದ ವರ್ತಿಸಿ, ನಿಮ್ಮ ಬೆಂಬಲದ ಅಗತ್ಯವಿರುವ ಜನರೊಂದಿಗೆ ಸಮಯವನ್ನು ಕಳೆಯಿರಿ. ಧನ್ಯವಾದ ಸಮರ್ಪಿಸುವಂತಹ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಿ.