ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಕಾಡುಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹುಲಿ ಸೆರೆಹಿಡಿಯಲು ಹೋಗಿದ್ದಾಗ ಕಾರ್ಯಾಚರಣೆಗೆ ಬಂದಿದ್ದ ಆನೆ ಭೀಮ ಮತ್ತು ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ನಡೆಸಿತ್ತು.
ಇಂದು(ಎ.15) ಕೊಡಗಿನಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ನಡೆಸಿದ ದಾಳಿಯಿಂದ ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಪೊನ್ನಂಪೇಟೆ (Ponnampete) ತಾಲ್ಲೂಕಿನ ಬೀರುಗ ಗ್ರಾಮದ ಚಾಮುಂಡಿಕೊಲ್ಲಿ ರಸ್ತೆಯಲ್ಲಿ ಘಟನೆ ನಡೆದಿದೆ. ಅಯ್ಯಮಾಡ ಮಾದಯ್ಯ (63) ಕಾಡಾನೆ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಇವರು ಮುಂಜಾನೆ ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ, ಕಾಫಿ ತೋಟದ ನಡುವಿನಿಂದ ನುಗ್ಗಿಬಂದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಗ್ರಾಮ ಹಾಗೂ ಸುತ್ತಮುತ್ತಲಲ್ಲಿ ಆನೆಗಳ ಹಿಂಡು ಸಂಚಾರ ಮಾಡುತ್ತಿದೆ. ಇದರಿಂದ ಮನೆಯಿಂದ ಹೊರಬೀಳಲೂ ಭಯವಾಗುತ್ತಿದೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ತೋಟದ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯಭೀತಿಯಿಂದಾಗಿ ಬರುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.