ನ್ಯೂಸ್ ನಾಟೌಟ್ : ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಬಾರಿ ವಿಶೇಷವೆಂಬಂತೆ ಕೊಡಗಿನಲ್ಲಿ ಬಾರಿ ಸಿದ್ಧತೆಗಳು ಭರ್ಜರಿಯಾಗಿ ನಡಿತಿವೆ. ಎರಡೂ ಪಕ್ಷಗಳೂ ಗೆಲುವಿಗಾಗಿ ತಂತ್ರ, ಪ್ರತಿತಂತ್ರ ರೂಪಿಸುವುದರಲ್ಲಿ ನಿರತವಾಗಿವೆ.
ಒಂದೆಡೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವಿಗೆ ಬಿಜೆಪಿ ಮತ್ತು ಜೆಡಿಎಸ್ ತಂತ್ರ ಹೆಣೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಕೂಡಾ ಪ್ರತಿತಂತ್ರ ರೂಪಿಸುವ ಕೆಲಸ ಮಾಡುತ್ತಿದೆ. ತಟಸ್ಥರಾಗಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸಕ್ರಿಯಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾದರೆ, ಕಾಂಗ್ರೆಸ್ ಸಂಘಟನೆಗಳ ಪ್ರಮುಖರನ್ನು ಪಕ್ಷಕ್ಕೆ ಸೆಳೆದುಕೊಳ್ಳುವುದರೊಂದಿಗೆ ಬಿಜೆಪಿಗೆ ಸೆಡ್ಡು ಹೊಡೆಯುತ್ತಿದೆ ಎಂದೇ ಹೇಳಬಹುದು.
ನಾವಿಕನಿಲ್ಲದ ಹಡಗಿನಂತಾಗಿದ್ದ ಕೊಡಗು ಜೆಡಿಎಸ್ ಕಾರ್ಯಕರ್ತರು ಮೈತ್ರಿ ವಿಚಾರದಲ್ಲಿ ಮೌನ ವಹಿಸಿದ್ದರು.ಆದರೆ ಇನ್ನೂ ಕೆಲವರು ಮೈತ್ರಿ ಕಾರಣದಿಂದಲೇ ಪಕ್ಷ ತೊರೆದರು, ಇನ್ನೂ ಕೆಲವರು ತಟಸ್ಥರಾಗಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕೈಜೋಡಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಶನಿವಾರ ಮಡಿಕೇರಿಗೆ ಆಗಮಿಸಿದ್ದ ಜೆಡಿಎಸ್ ಪ್ರಮುಖರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಕಾರ್ಯಕರ್ತರ ಸಭೆ ನಡೆಸಿದ್ದು, ಯದುವೀರ್ ಗೆಲುವಿಗೆ ಪಣ ತೊಡಬೇಕೆಂದು ಕರೆ ನೀಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನು ಸಕ್ರಿಯಗೊಳಿಸಿರುವ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಕಾಂಗ್ರೆಸ್, ಜಿಲ್ಲೆಯ ಪ್ರಮುಖ ಹೋರಾಟಗಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ಮತ್ತು 10 ವರ್ಷಗಳಿಂದ ಕೊಡಗು ರಕ್ಷಣಾ ವೇದಿಕೆ ಸಂಘಟನೆಯ ಮೂಲಕ ಜಿಲ್ಲೆಯಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿರುವ ಕೊರವೇ ಸ್ಥಾಪಕ, ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಭಾನುವಾರ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.ಇವರಿಬ್ಬರಲ್ಲದೆ ಇತ್ತೀಚೆಗೆ ಅಲ್ಪಸಂಖ್ಯಾತ ಮುಖಂಡ ಇಸಾಕ್ ಖಾತ್ ಮತ್ತು ಮಡಿಕೇರಿ ನಗರಸಭೆ ಸದಸ್ಯ ಕೆ.ಯು.ಅಶ್ರಫ್ ಕೂಡಾ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ನಾನಾ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆದಿದ್ದಾರೆ.