ವಿಶೇಷ ವರದಿ: ಹೇಮಂತ್ ಸಂಪಾಜೆ
ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಆರಂಭವಾಗಿರುವ ಕೆನರಾ ಬ್ಯಾಂಕ್ ಇತಿಹಾಸ ಒಂದು ಶತಮಾನಕ್ಕೂ ಮಿಗಿಲಾದದ್ದು..! ಈ ರಾಷ್ಟ್ರೀಕೃತ ಬ್ಯಾಂಕ್ ಸಾವಿರಾರು ಗ್ರಾಹಕರನ್ನ ಹೊಂದಿದ್ದರೂ ಕಳೆದೊಂದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಸುತ್ತಮುತ್ತಲಿನ ನಾಲ್ಕು ಗ್ರಾಮಗಳಿಗೆ ದೊಡ್ದ ಶಾಪವಾಗಿ ಪರಿಣಮಿಸಿಬಿಟ್ಟಿದೆ.
ಹೌದು, ಸಂಪಾಜೆ ಮತ್ತು ಅದರ ಸುತ್ತಮುತ್ತಲಿನ ಚೆಂಬು, ಮದೆನಾಡು ಗ್ರಾಮದ ಜನರು ಬಹುತೇಕರು ಕೃಷಿಕರು. ಕಡು ಬಡವರು, ಸಣ್ಣ ಹಾಗೂ ಮಧ್ಯಮ, ವರ್ಗದವರು. ದಕ್ಷಿಣ ಕನ್ನಡ ಸಂಪಾಜೆ ಹಾಗೂ ಕೊಡಗು ಸಂಪಾಜೆ ಸೇರಿದಂತೆ ಈ ಗ್ರಾಮದಲ್ಲಿ ಸಾವಿರಾರು ಮನೆಗಳಿವೆ. ಇಲ್ಲಿನ ಜನರು ಬ್ಯಾಂಕಿಂಗ್ ಸೇವೆಗೆ ರಾಷ್ಟ್ರೀಯ ಬ್ಯಾಂಕ್ ಅನ್ನುವ ಹಣೆಪಟ್ಟಿಯನ್ನು ಹೊಂದಿರುವ ಕೆನರಾ ಬ್ಯಾಂಕ್ ಅನ್ನೇ ಅವಲಂಭಿಸಿದ್ದಾರೆ. ಒಂದು ರೂಪಾಯಿ ಹಾಕುವುದಕ್ಕೂ ಒಂದು ರೂಪಾಯಿ ತೆಗೆಯುವುದಕ್ಕೂ ಜನ ಈ ಬ್ಯಾಂಕ್ ಗೆ ಬರಲೇಬೇಕು. ಮಕ್ಕಳಿಗೆ ಶೈಕ್ಷಣಿಕ ಸಾಲ, ಸಬ್ಸಿಡಿ ಲೋನ್, ಗೃಹ ಲಕ್ಷ್ಮೀ ಯೋಜನೆ, ಪೆನ್ಷನ್ ಸೇರಿದಂತೆ ಎಲ್ಲ ಹತ್ತು ಹಲವು ಕೆಲಸಗಳಿಗೆ ಈ ಬ್ಯಾಂಕ್ ಅವಶ್ಯಕತೆ ಇದೆ. ಆದರೆ ಕಳೆದೊಂದು ವರ್ಷಗಳಿಂದ ಆ ಬ್ಯಾಂಕ್ ನಲ್ಲಿ ಸಿಬ್ಬಂದಿ ಕೊರತೆ ಎದುರಾಗಿ ಊರಿನ ಜನ ಈಗ ಹಿಡಿಶಾಪ ಹಾಕುವಂತಾಗಿದೆ.
ರಾಷ್ಟ್ರೀಯ ಬ್ಯಾಂಕ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಕೆನರಾ ಬ್ಯಾಂಕ್ ನ ಚೆಲ್ಲಾಟಕ್ಕೆ ಗ್ರಾಹಕರು ಮಾತ್ರ ನಿತ್ಯ ಹೈರಾಣಾಗುವಂತಾಗಿದೆ. ಅತ್ತ ಕೆಲಸಕ್ಕೆ ಹೋದರೆ ಗ್ರಾಹಕನಿಗೆ ಬ್ಯಾಂಕ್ ಕೆಲಸ ಬಾಕಿ ಉಳಿಯಿತಲ್ಲ ಎಂಬ ಚಿಂತೆ, ಕೆಲಸ ಬಿಟ್ಟು ದಿನವಿಡೀ ಬ್ಯಾಂಕ್ ನಲ್ಲಿ ಕಾದು ಕುಳಿತರೆ ಇವತ್ತು ಆಗಲ್ಲ ನಾಳೆ ಬನ್ನಿ, ಸಿಬ್ಬಂದಿ ಇಲ್ಲ ಇವತ್ತು, ಸರ್ವರ್ ಡೌನ್ ಆಗಿದೆ ಎಂಬ ರೆಡಿಮೆಡ್ ಉತ್ತರಗಳು ಸಿಗುತ್ತಿವೆ. ಪ್ರತಿ ಸಲವೂ ಬ್ಯಾಂಕ್ ಗೆ ಭೇಟಿ ಕೊಟ್ಟಾಗಲೂ ಗ್ರಾಹಕನಿಹೆ ಅಹಿತಕರ ಅನುಭವವೇ ಆಗುತ್ತದೆ. ಒಮ್ಮೆ ಬ್ಯಾಂಕ್ ನ ಒಳಗೆ ಹೋಗಿ ಬರುವಾಗ ಗ್ರಾಹಕನ ಮುಖದಲ್ಲಿ ಕೋಪ ಉಕ್ಕಿ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ . ಕಲ್ಲುಗುಂಡಿಯಲ್ಲಿರುವ ಈ ಬ್ಯಾಂಕ್ ನಲ್ಲಿ ಸದ್ಯ ಮೂರು ಜನ ಸಿಬ್ಬಂದಿಗಳಿದ್ದಾರೆ. ಒಬ್ಬರು ರಜೆ ಹಾಕಿದ್ರೆ ಇಬ್ಬರೇ ಕೆಲಸ ನಿರ್ವಹಿಸುವ ಅನಿವಾರ್ಯತೆಯಿದೆ. ಬೆಳಗ್ಗೆ ಬಂದ ಸಿಬ್ಬಂದಿ ರಾತ್ರಿ ಹತ್ತು ಗಂಟೆ ತನಕವೂ ನಿರಂತರವಾಗಿ ಕೆಲಸ ನಿರ್ವಹಿಸಬೇಕಿದೆ. ಬ್ಯಾಂಕ್ ನ ಆ ಮ್ಯಾನೇಜರ್ ಈಗ ಮಧ್ಯಾಹ್ನದ ಊಟವನ್ನು ಸಂಜೆ 6 ಗಂಟೆಗೆ ಮಾಡಬೇಕಾದ ಸ್ಥಿತಿಯಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಗ್ರಾಹಕರ ಸೇವೆಗೆ ಮೀಸಲಾಗಿರುವ ಈ ಬ್ಯಾಂಕ್ ಗೆ ಇಂತಹ ಗತಿ ಬಂದ್ರೆ ಹೇಗೆ..? ತನ್ನಿಂದ ಗ್ರಾಹಕರಿಗೆ ಸೇವೆ ಕೊಡಲು ಸಾಧ್ಯವಾಗದಿದ್ದರೆ ಬೇರೆ ಬ್ಯಾಂಕ್ ಗಳಿಗೆ ಕೆಲಸ ನಿರ್ವಹಿಸಲು ಬಿಟ್ಟು ಕೊಡಬಹುದಲ್ವಾ..? ವಿನಾಃ ಕಾರಣ ಜನರಿಗೆ ತೊಂದರೆ ಕೊಡುವ ಈ ಬ್ಯಾಂಕ್ ನ ಸೇವೆ ಬೇಕೆ..? ಅನ್ನುವ ಪ್ರಶ್ನೆ ಈಗ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಈ ಹಿಂದೆ ಬ್ಯಾಂಕ್ ನಲ್ಲಿ ಸಿಬ್ಬಂದಿ ಇದ್ದಾಗಲೂ ಸಮಾಧಾನದ ವಿಚಾರ ಯಾವುದೂ ಇರಲಿಲ್ಲ. ಇಂಗ್ಲಿಷ್ , ಹಿಂದಿಯಲ್ಲಿ ಸಂವಹನ ಮಾಡುವ ಸಿಬ್ಬಂದಿಯನ್ನೇ ಗ್ರಾಮದ ಜನರಿಗೆ ಸೇವೆಗೆ ಒದಗಿಸಿರೋದು ಕೆನರಾ ಬ್ಯಾಂಕ್ ನ ದೊಡ್ಡ ಸಾಧನೆ. ಕನ್ನಡ, ಅರೆಭಾಷೆ, ತುಳು ಬಲ್ಲವರೇ ಹೆಚ್ಚು ಇರುವ ಇಂತಹ ಊರಿನಲ್ಲಿ ಗ್ರಾಹಕರು ಕೈ ಭಾಷೆ, ನಟನೆಯ ಮೂಲಕವೇ ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಿದೆ. ಬ್ಯಾಂಕ್ ನ ಮೇಲಿನ ಅಧಿಕಾರಿಗಳಿಗೆ ಇದೆಲ್ಲ ತಿಳಿದಿದ್ದರೂ ಗಾಢ ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಂಡಿಲ್ಲ. ನಿಮಗೆ ಸೇವೆ ಕೊಡುವುದಕ್ಕೆ ಆಗಿಲ್ಲ ಅಂದ ಮೇಲೆ ನೀವು ಇಲ್ಲೆ ಇರಿ ಅಂತ ಜನ ಒತ್ತಾಯಿಸುತ್ತಿಲ್ಲ. ನೀವು ಬಾಗಿಲು ಮುಚ್ಚಿ. ನಿಮ್ಮ ಬದಲಿಗೆ ಇನ್ನೊಂದು ರಾಷ್ಟ್ರೀಯ ಬ್ಯಾಂಕ್ ಊರಿನಲ್ಲಿ ಕಾರ್ಯಾಚರಿಸಲಿ, ಈ ಮೂಲಕ ಸುಮಾರು ೨೫ ಸಾವಿರಕ್ಕೂ ಅಧಿಕ ಜನರಿಗೆ ಸಹಾಯವಾಗಲಿ ಅನ್ನುವುದಷ್ಟೇ ಊರಿನ ಜನರ ಒತ್ತಾಯವಾಗಿದೆ. ಈ ಒತ್ತಾಯಕ್ಕೆ ಬ್ಯಾಂಕ್ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಯುವುದಂತೂ ಖಚಿತ.