ಟೋಕಿಯೋ: ಸಿರಿಯಾ ದೇಶ ನಿಮಗೆಲ್ಲರಿಗೂ ಗೊತ್ತಿದೆ. ಅಲ್ಲಿ ಯುದ್ಧವೊಂದನ್ನು ಬಿಟ್ಟರೆ ಬೇರೆ ಯಾವ ಮಾತಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ ಬಂದೂಕಿನ ಸದ್ದು ಸದಾ ಕೇಳುತ್ತಿರಬೇಕು. ಇದು ಅಲ್ಲಿನ ಹೀನ ಮನಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಪುಟ್ಟ ಬಾಲಕಿಯೊಬ್ಬಳು ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದ್ದಾಳೆ. ಅಚ್ಚರಿಯ ಈ ಬೆಳವಣಿಗೆ ಕ್ರೀಡಾ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೇ ಸ್ಫೂರ್ತಿ.
ಯಾರಿವಳು ಹುಡುಗಿ?
ಹೆಸರು ಹೆಂಡ್ ಝಾಝಾ. ಆಕೆಗೆ ಇನ್ನೂ 12 ವರ್ಷ. ಯುದ್ಧಭೂಮಿ ಸಿರಿಯಾದಲ್ಲಿ ಅರಳಿದ ಅಪ್ಪಟ ಪ್ರತಿಭೆ. ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅವರು ಟೇಬಲ್ ಟೆನಿಸ್ ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ ಏಕೈಕ ಆಟಗಾರ್ತಿ. ಆದರೆ ಮೊದಲ ಸುತ್ತಿನ ಪಂದ್ಯದಲ್ಲಿಯೇ ಸೋಲುವ ಮೂಲಕ ನಿರಾಶೆ ಮೂಡಿಸಿದ್ದಾರೆ. ಅವರು ತನಗಿಂತ ಮೂರು ಪಟ್ಟು ವಯಸ್ಸಿನಲ್ಲಿ ದೊಡ್ಡವರಾಗಿರುವ 39 ವರ್ಷದ ಆಸ್ಟ್ರೀಯಾದ ಲಿಯು ವಿರುದ್ಧ ಸೋಲು ಅನುಭವಿಸಿದರು.
ಸಿರಿಯಾ ನಾರಿಯ ಶಪಥ
ಸಾಮಾನ್ಯವಾಗಿ ಸೋಲು ಕ್ರೀಡಾಪಟುವನ್ನು ನಿರಾಸೆಗೆ ದೂಡುತ್ತದೆ. ಎಷ್ಟೋ ಸಲ ಸೋತ ತಕ್ಷಣ ಕಣ್ಣೀರಾಗುವುದನ್ನು ನೋಡಿದ್ದೇವೆ. ಅಂತಹುದರಲ್ಲಿ ಸಿರಿಯಾದ ಹುಡುಗಿ ಮುಂದಿನ ಒಲಿಂಪಿಕ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವುದಾಗಿ ತಿಳಿಸಿದ್ದಾಳೆ. ಕ್ರೀಡಾ ಸ್ಫೂರ್ತಿ ಮೆರೆದಿದ್ದಾಳೆ. ಇಂತಹ ಧೈರ್ಯ ಎಲ್ಲ ಹೆಣ್ಣು ಮಕ್ಕಳಿಗೂ ಬರಲಿ ಅನ್ನೋದು ನ್ಯೂಸ್ ನಾಟೌಟ್ ಆಶಯವಾಗಿದೆ.