ನ್ಯೂಸ್ ನಾಟೌಟ್: ಕೊಡಗು -ದಕ್ಷಿಣ ಕನ್ನಡ ಗಡಿ ಭಾಗದ ಊರು ಸಂಪಾಜೆ. ಸ್ವಚ್ಛ ಸುಂದರ ಪರಿಸರದ ನಾಡಿನಲ್ಲಿ ಈಗ ನಿತ್ಯ ಕಾಡುಪ್ರಾಣಿಗಳದ್ದೇ ಉಪಟಳ. ಕಾಡಾನೆ, ಚಿರತೆ, ಕಾಡುಕೋಣದ ಹಾವಳಿಗೆ ಜನ ತತ್ತರಿಸಿ ಹೋಗಿದ್ದಾರೆ.
ಕಾಡಾನೆ ಕಳೆದೆರಡು ದಿನಗಳಲ್ಲಿ ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳನ್ನು ನಾಶ ಮಾಡಿದ್ದರೆ ಚಿರತೆ ಕೂಡ ಕಾಣಿಸಿಕೊಂಡಿದೆ. ಮಾತ್ರವಲ್ಲ ಕಾಡುಕೋಣಗಳು ಕೂಡ ನೇರವಾಗಿ ಇದೀಗ ಜನರ ತೋಟಗಳಿಗೆ ಲಗ್ಗೆ ಇಡುತ್ತಿದೆ. ಇದರಿಂದ ಜನ ನಿತ್ಯ ಪ್ರಾಣ ಭಯದಲ್ಲೇ ಬದುಕುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕೆಂದು ಊರಿನವರು ಆಗ್ರಹಿಸುತ್ತಿದ್ದಾರೆ.
ಕಲ್ಲುಗುಂಡಿ ಸಮೀಪ ಕೀಲಾರು ಎಂಬಲ್ಲಿ ಹಲವು ಮನೆಗಳಿದ್ದು ಈ ಮನೆಗಳ ಸುತ್ತ ಆನೆಗಳ ದಾಳಿ ನಿರಂತರವಾಗಿ ನಡೆಯುತ್ತಿದೆ. ಕಳೆದ ಎರಡು ತಿಂಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿದ್ದು ನಿತ್ಯ ಹಾವಳಿಗೆ ಜನ ತತ್ತರಿಸಿ ಹೋಗಿದ್ದಾರೆ. ತೆಂಗಿನಮರ ಮತ್ತು ರಬ್ಬರ್ ಗಿಡಗಳು ಸಂಪೂರ್ಣವಾಗಿ ನಾಶವಾಗುತ್ತಿದೆ. ಅಲ್ಲದೆ ಕಳೆದ ಕೆಲವು ತಿಂಗಳಿನಿಂದ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯವನ್ನು ಮೂಡಿಸಿದೆ.
ಕತ್ತಲಾಗುತ್ತಿದ್ದಂತೆ ಚಿರತೆ ಕೆಲವು ಮನೆಗಳ ಅಂಗಳದ ಬಳಿಯೂ ಕಾಣಿಸಿದೆ. ಈ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಕಾಡು ಕೋಣಗಳು ಕೂಡ ಆ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ಕತ್ತಲಾಗುತ್ತಿದ್ದಂತೆ ಕೀಲಾರು ಪರಿಸರದಲ್ಲಿ ಜನ ಓಡಾಟ ಮಾಡುವುದೇ ಕಷ್ಟವಾಗಿದೆ. ಸಂಜೆ ಕೆಲಸ ಮುಗಿಸಿ ಬರುವ ಪುರುಷರ, ಮಹಿಳೆಯರು ಹಾಗೂ ಶಾಲೆಯಿಂದ ನಡೆದುಕೊಂಡು ಬರುವ ಮಕ್ಕಳ ಜೀವ ರಕ್ಷಣೆ ಹಿನ್ನೆಲೆ ತಕ್ಷಣ ಶಾಸಕರು ಸ್ಥಳಕ್ಕೆ ಭೇಟಿ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.