ನ್ಯೂಸ್ ನಾಟೌಟ್: ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿ, ತಮಿಳುನಾಡಿನ ಮಾಜಿ ರಾಜ್ಯಪಾಲೆ ನ್ಯಾ. ಎಂ. ಫಾತಿಮಾ ಬೀವಿ ಗುರುವಾರ ನ.23 ರಂದು ನಿಧನರಾಗಿದ್ದಾರೆ.
ಕೇರಳದ ಪಂದಳಂ ಮೂಲದವರಾದ ನ್ಯಾ. ಫಾತಿಮಾ ಬೀವಿ ಕೇರಳದಲ್ಲಿ ಕಾನೂನು ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದರು. 1950ರ ನವೆಂಬರ್ 14ರಂದು ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1983ರಲ್ಲಿ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನಂತರ 1989ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರು. ದೇಶದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಮೂರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
96 ವರ್ಷ ವಯಸ್ಸಾಗಿಸ್ಸಿನ ಇವರು ಕೊಲ್ಲಂನ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೊನೆಯುಸಿರೆಳೆದಿದ್ದಾರೆ. 1992ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತ ಹೊಂದಿದ್ದರು. ಬಳಿಕ 1997ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಈ ಮೂಲಕ ಕೂಡ ರಾಜ್ಯಪಾಲರ ಹುದ್ದೆ ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ರಾಜ್ಯಪಾಲರಾಗಿದ್ದ ಅವಧಿಯಲ್ಲಿ ನ್ಯಾ. ಫಾತಿಮಾ ಬೀವಿ ತಮಿಳುನಾಡು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2001ರ ವರೆಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇದರ ಹೊರತಾಗಿ ನ್ಯಾ. ಫಾತಿಮಾ ಬೀವಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ಹಿಂದುಳಿದ ವರ್ಗಗಳ ಕೇರಳ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದರು. ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೇ ವರ್ಷದ ಆರಂಭದಲ್ಲಿ ಇವರ ಜೀವನ ಕುರಿತು ‘ನೀತಿಪಥದಲ್ಲಿ ಧೀರ ವನಿತಾ’ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು ಎಂದು ವರದಿ ಹೇಳಿದೆ.