ನ್ಯೂಸ್ ನಾಟೌಟ್ : ಪುತ್ತೂರಿನಲ್ಲಿ ಕಲ್ಲೇಗ ಟೈಗರ್ಸ್ ರೂವಾರಿ ಅಕ್ಷಯ್ ಕಲ್ಲೇಗ ಜೀವ ತೆತ್ತ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಹಲವು ವಿಚಾರಗಳು ಬಯಲಿಗೆ ಬರುತ್ತಿವೆ. ಕೇವಲ 1800 ರೂ.ಗೆ ಈ ಕೃತ್ಯವೆಸಗಲಾಗಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಮಧ್ಯೆ ಕೃತ್ಯ ನಡೆದ ಸ್ಥಳದ ಬಗ್ಗೆ ಕೆಲವೊಂದಷ್ಟು ಆರೋಪಗಳು ಸ್ಥಳೀಯವಾಗಿ ಕೇಳಿ ಬಂದಿದೆ.
ಅಪಘಾತದಿಂದ ಗಾಯಗೊಂಡ ಯುವಕನಿಗೆ ಚಿಕಿತ್ಸೆ ನೀಡಿದ ಬಳಿಕ ಅದರ ವೆಚ್ಚವನ್ನು ಅಪಘಾತ ಎಸಗಿದವನಿಂದ ಕೇಳಲಾಗಿದೆ.ಬಳಿಕ ಮಾತಿಗೆ ಮಾತು ಬೆಳೆದು ನಂತರ ಉಂಟಾದ ದ್ವೇಷವೇ `ಕಲ್ಲೇಗ ಟೈಗರ್ಸ್’ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಪ್ರಕರಣಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಮತ್ತೊಂದೆಡೆ ಅಲ್ಲಿನ ಸ್ಥಳೀಯರು ಕೆಲವೊಂದಷ್ಟು ವಿಚಾರಗಳ ಕುರಿತಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ಅಕ್ಷಯ್ ಕಲ್ಲೇಗ ಕೃತ್ಯ ನಡೆದ ಸ್ಥಳ ಸೇರಿದಂತೆ ನೆಹರು ನಗರದ ವಿವೇಕಾನಂದ ಕಾಲೇಜು ರಸ್ತೆ ರಾತ್ರಿ ವೇಳೆ ಅಕ್ರಮ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಾಲೇಜು ರಸ್ತೆಯಲ್ಲಿ ರಾತ್ರಿ ಹೊತ್ತಲ್ಲಿ ಜನ ಓಡಾಡಲು ಹೆದರುತ್ತಿದ್ದು, ಮಹಿಳೆಯರಂತೂ ಈ ರಸ್ತೆಯ ಮೂಲಕ ಹೋಗುವುದೇ ಕಷ್ಟ ಸಾಧ್ಯ ಎಂದಿದ್ದಾರೆ.ಮಾದಕ ಪದಾರ್ಥ ಮತ್ತು ಮದ್ಯದ ನಶೆಯಲ್ಲಿರುವವರಿಂದ ಆಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ ಎಂದು ನಾಗರಿಕರು ದೂರಿದ್ದಾರೆ.
ಇನ್ನೊಂದು ಆಘಾತಕಾರಿ ಸಂಗತಿಯೇನೆಂದರೆ ಈ ಪ್ರದೇಶಕ್ಕೆ ರಾತ್ರಿ ಮಾದಕ ಪದಾರ್ಥ ಪೂರೈಕೆ ಆಗುತ್ತಿದೆ ಎನ್ನುವ ಸಂಗತಿಯೊಂದು ಹೊರಬಿದ್ದಿದ್ದು, ಇಲ್ಲಿನವರು ಮಾತ್ರವಲ್ಲದೆ ಸುತ್ತಮುತ್ತಲಿನ ಬನ್ನೂರು, ಕೆಮ್ಮಾಯಿ, ಚಿಕ್ಕಮುಡ್ನೂರು ವ್ಯಾಪ್ತಿಯವರೂ ಬರುತ್ತಿದ್ದು, ಹೀಗೆ ಸೇರುವವರು ತಡರಾತ್ರಿ ತನಕವೂ ಅಂಗಡಿಗಳ ಬಳಿ ಗುಂಪು ಗಟ್ಟಿ ಸಮಸ್ಯೆ ಮಾಡುತ್ತಿದ್ದಾರೆ ಎನ್ನುವ ಅಂಶ ಸ್ಥಳೀಯವಾಗಿ ಕೇಳಿ ಬಂದಿದೆ. ರಸ್ತೆ ಬದಿಯಲ್ಲಿರುವ ಮದ್ಯದ ಬಾಟಲಿಗಳೇ ಇದೆಲ್ಲವನ್ನು ಸಾಕ್ಷಿ ನುಡಿಯುತ್ತಿದೆ.
ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್, ಸೋಮವಾರ ರಾತ್ರಿ ಸ್ನೇಹಿತರಾದ ವಿಖ್ಯಾತ್ ಬಿ ಮತ್ತು ಅಲ್ತಾಫ್ ಅವರ ಜೊತೆ ನೆಹರು ನಗರ ಜಂಕ್ಷನ್ ಬಳಿಯ ಬೀಡಾ ಅಂಗಡಿಯಲ್ಲಿ ನಿಂತಿದ್ದ ವೇಳೆ ರಸ್ತೆ ದಾಟುತ್ತಿದ್ದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಗಾಯಾಳು ವಿದ್ಯಾರ್ಥಿ ಮತ್ತು ಬೈಕ್ ಸವಾರನನ್ನು ಅಕ್ಷಯ್ ಮತ್ತು ಅಲ್ತಾಫ್ ರಿಕ್ಷಾದಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವೇಳೆ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ 1800 ರೂ. ವೆಚ್ಚ ಆಗಿತ್ತು.ಹಣ ಪಾವತಿಸುವಂತೆ ಬೈಕ್ ಸವಾರನಿಗೆ ತಿಳಿಸಿದಾಗ ಪರಿಚಯದ ಮನೀಶ್ ಮತ್ತು ಚೇತನ್ಗೆ ಕರೆಮಾಡಿ ಅವರಲ್ಲಿ ಮಾತನಾಡುವಂತೆ ಮೊಬೈಲ್ ಪೋನ್ ಕೊಟ್ಟಿದ್ದ. ಆಸ್ಪತ್ರೆ ಬಿಲ್ ಪಾವತಿಸುವುದಿಲ್ಲ. ನೀವು ಬೇಕಾದರೆ ಪೊಲೀಸ್ ದೂರು ನೀಡಿ ಎಂದು ಹೇಳಿದ ಚೇತನ್ ಕಾಲ್ ಕಟ್ ಮಾಡಿದ್ದ ಎನ್ನಲಾಗಿದೆ.ಅಕ್ಷಯ್ ಬಳಗದ ಕಾರ್ತಿಕ್ ಆಸ್ಪತ್ರೆ ಬಿಲ್ ಪಾವತಿಸಿ ಗಾಯಾಳುಗಳು, ಅಕ್ಷಯ್, ವಿಖ್ಯಾತ್ ಮತ್ತು ಅಲ್ತಾಫ್ ಅವರನ್ನು ಕಾರಿನಲ್ಲಿ ನೆಹರೂ ನಗರಕ್ಕೆ ಬಿಟ್ಟಿದ್ದರು. ಆಸ್ಪತ್ರೆ ಬಿಲ್ ವಿಷಯದಲ್ಲಿ ಅಕ್ಷಯ್, ಮನೀಶ್ ಮತ್ತು ಚೇತನ್ ನಡುವೆ ಮೊಬೈಲ್ ಫೋನ್ ಮೂಲಕ ನಡೆದ ಮಾತಿನ ಚಕಮಕಿ ಈ ಕೃತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಆರೋಪಿಗಳಾದ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಪುತ್ತೂರು ಜೆಡಿಎಸ್ ಕ್ಷೇತ್ರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ಮಣಿಯನ್ ಪುತ್ರ ಮನೀಶ್, ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿ, ಬಸ್ ಚಾಲಕ ಚೇತನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ, ನಗರದ ಹೊರವಲಯದ ಪಡೀಲು ನಿವಾಸಿ ಕೇಶವ ಪಡೀಲು ಮತ್ತು ಪಡೀಲು ನಿವಾಸಿ ಮಂಜುನಾಥ ಯಾನೆ ಮಂಜುಗೆ ಬುಧವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಅವರನ್ನು ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಪ್ರಮುಖ ಆರೋಪಿಗಳಾದ ಮನೀಶ್ ಮತ್ತು ಚೇತನ್ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದು, ಕೇಶವ ಪಡೀಲು ಮತ್ತು ಮಂಜು ಯಾನೆ ಮಂಜುನಾಥನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು.