ನ್ಯೂಸ್ ನಾಟೌಟ್: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಯುವತಿಗೆ ಕಾರು ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆ ಗುರುವಾರ (ಸೆ.12) ಸಾಯಂಕಾಲ 6.30ಕ್ಕೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಭವಿಸಿದೆ.
ಮೃತ ಯುವತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ( 23) ಎಂದು ಗುರುತಿಸಲಾಗಿದೆ.
ಬಿಸಿರೋಡಿನ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಪಾವನ ಎಂಬಾಕೆ ಸಂಜೆ ಕೆಲಸ ಬಿಟ್ಟು ಬಿಸಿರೋಡಿನಿಂದ ಬಸ್ ಮೂಲಕ ಊರಿಗೆ ತೆರಳಿದ್ದಳು. ದಾಸಕೋಡಿ ಎಂಬಲ್ಲಿ ಬಸ್ಸಿನಿಂದ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದು, ಕಾರು ಕೂಡ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.