ನ್ಯೂಸ್ ನಾಟೌಟ್: ರಾಜ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ (Human-animal Conflict) ದಿನೇದಿನೇ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ (Forest Department) ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಜತೆಗೆ ಇದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿರುವ ʻಮುಖ್ಯಮಂತ್ರಿಗಳ ಪದಕ ಪ್ರದಾನʼ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಕೆಲಸವಾಗಬೇಕು. ಅರಣ್ಯ ಪ್ರದೇಶದ ವಿಸ್ತೀರ್ಣಗೊಂಡರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ ಎಂದರು. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ʻʻಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ದಾರಿ. ಅರಣ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗ ಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯʼʼ ಎಂದು ಸಿದ್ದರಾಮಯ್ಯ ಹೇಳಿದರು.