ನ್ಯೂಸ್ ನಾಟೌಟ್: ವಿಶ್ವಕಪ್ ಕ್ರಿಕೆಟ್ (World Cup 2023) ಕೂಟಕ್ಕೆ ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಮಹಾ ಸಮರಕ್ಕೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಎಲ್ಲ ತಂಡಗಳು ಕೂಡ ಭಾರತಕ್ಕೆ ಆಗಮಿಸುತ್ತಿದೆ. ಈ ನಡುವೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ಭಾರತದ ನೆಲಕ್ಕೆ ಕಾಲಿಟ್ಟಿದ್ದು ಪಾಕ್ ಕ್ರಿಕೆಟಿಗರಿಗೆ ಹೈದರಾಬಾದ್ ನಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ಇಂತಹ ಸ್ವಾಗತ ನೋಡಿ ಪಾಕಿಸ್ತಾನ ಆಟಗಾರರು ಕೂಡ ಶಾಕ್ ಆಗಿದ್ದಾರೆ.
ಪಾಕ್ ಕ್ರಿಕೆಟಿಗರನ್ನು ಕೇಸರಿ ಶಾಲು ಹಾಕಿ ಹೈದರಾಬಾದ್ ನ ಹೋಟೆಲ್ ನಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಸ್ವತಃ ಪಾಕ್ ಆಟಗಾರರು, ಪಿಸಿಬಿ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದುಬೈನಿಂದ ಬಂದ ಪಾಕ್ ಆಟಗಾರರಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿರೀಕ್ಷೆಗೂ ಮೀರಿದ ಸ್ವಾಗತ ನೀಡಲಾಯಿತು. ಬಳಿಕ ಬಿಗಿ ಪೊಲೀಸ್ ಭದ್ರತೆಯ ನಡುವೆ ಪಾಕ್ ತಂಡವನ್ನು ಬಂಜಾರಾ ಹಿಲ್ಸ್ನ ಪಾರ್ಕ್ ಹಯಾತ್ ಹೋಟೆಲ್ಗೆ ಸ್ಥಳಾಂತರಿಸಲಾಯಿತು. ಪಾಕ್ ಆಟಗಾರರಿಗೆ ಭಾರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹೈದರಾಬಾದ್ ಬಿರಿಯಾನಿ, ಮಟನ್ ಕರಿ ಸೇರಿದಂತೆ ವಿಶೇಷ ಮೆನುವನ್ನು ಏರ್ಪಡಿಸಲಾಗಿದೆ. ಇವುಗಳ ಜೊತೆಗೆ ಗ್ರಿಲ್ಡ್ ಲಂಚ್ ಚಾಪ್ಸ್, ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ಕೂಡ ಮೆನುವಿನಲ್ಲಿದೆ. ವಿಶೇಷವಾಗಿ ಪಾಕಿಸ್ತಾನದ ಆಟಗಾರರಿಗಾಗಿ ಬೇಯಿಸಿದ ಬಾಸ್ಮತಿ ಅಕ್ಕಿ, ಬೊಲೊಗ್ನೀಸ್ ಸಾಸ್ನೊಂದಿಗೆ ಸ್ಪಾಗೆಟ್ಟಿ ಮತ್ತು ವೆಜ್ ಪುಲಾವ್ ಅನ್ನು ಮೆನುವಿನಲ್ಲಿ ಸೇರಿಸಲಾಗಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಾಕಿಸ್ತಾನದ ಡಯಟ್ ಚಾರ್ಟ್ ಮಟನ್ ಕರಿ, ಬಟರ್ ಚಿಕನ್, ಗ್ರಿಲ್ಡ್ ಮಟನ್ ಚಾಪ್ಸ್ ಮತ್ತು ಗ್ರಿಲ್ಡ್ ಫಿಶ್ ಇತರ ಭಕ್ಷ್ಯಗಳನ್ನು ಒಳಗೊಂಡಿದೆ. 2023 ರ ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಬರುವ ಎಲ್ಲಾ ಹತ್ತು ತಂಡಗಳಿಗೆ ಗೋಮಾಂಸ ಲಭ್ಯವಿರುವುದಿಲ್ಲ. ಆದ್ದರಿಂದ ಪಾಕಿಸ್ತಾನ ತಂಡವು ತಮ್ಮ ಪ್ರೋಟೀನ್ ಅಗತ್ಯಗಳಿಗಾಗಿ ಮಟನ್, ಚಿಕನ್ ಮತ್ತು ಮೀನುಗಳನ್ನು ಅವಲಂಬಿಸಬೇಕಾಗುತ್ತದೆ.