ನ್ಯೂಸ್ ನಾಟೌಟ್: ಖಲಿಸ್ತಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಎನ್ಐಎ ಹಾಗೂ ಭಾರತೀಯ ಭದ್ರತಾ ಏಜೆನ್ಸಿಗಳು, ಈ ಉಗ್ರರಿಗೆ ಸೇರಿದ ಭಾರತದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.
19 ಕುಖ್ಯಾತ ಖಲಿಸ್ತಾನ ಉಗ್ರರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಈ ಉಗ್ರರು ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.ಈ ಉಗ್ರರಿಗೆ ಸೇರಿದ ಭಾರತದಲ್ಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆ ಶುರುವಾಗಿದ್ದು, ಈ ಪೈಕಿ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಆಸ್ತಿಗಳನ್ನು ಮೊದಲಿಗೆ ಸರ್ಕಾರ ತನ್ನ ವಶಕ್ಕೆ ಪಡೆದಿದೆ.ಈ ಉಗ್ರರನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಆಯಾ ದೇಶಗಳಿಗೆ ಭಾರತ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿತ್ತು.
ಆದರೆ, ಭಾರತದ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಕೆಲವು ತಿಂಗಳ ಹಿಂದೆ ಕೆನಡಾದಲ್ಲಿ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹ* ತ್ಯೆಯಾಗಿತ್ತು. ಈ ಹ* ತ್ಯೆಯನ್ನು ಭಾರತ ಸರ್ಕಾರದ ಏಜೆಂಟರೇ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಗಂಭೀರ ಆರೋಪ ಮಾಡಿದ್ದರು.
ಯಾವುದೇ ಸಾಕ್ಷ್ಯವಿಲ್ಲದೆ ಕೆನಡಾ ಪ್ರಧಾನಿ ಮಾಡಿರುವ ಆರೋಪ ಸಂಬಂಧ ಇದೀಗ ಭಾರತ – ಕೆನಡಾ ದೇಶಗಳ ನಡುವೆ ರಾಜತಾಂತ್ರಿಕ ಸಮರ ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರ 19 ಖಲಿಸ್ತಾನ್ ಉಗ್ರರ ಪಟ್ಟಿ ಸಿದ್ದಪಡಿಸಿದ್ದು, ಇವರೆಲ್ಲರ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಯುಎಪಿಎ ಅಡಿ ಕಾರ್ಯಾಚರಣೆ ನಡೆಸಿ, ಉಗ್ರರಿಗೆ ಸೇರಿರುವ ಭಾರತದಲ್ಲಿ ಇರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ.
ಈ ಮೂಲಕ ನಿಗೂಢವಾಗಿ ಉಗ್ರರ ಅಂತ್ಯಕ್ಕೆ ಭಾರತ ಮುಹೂರ್ತ ಇಟ್ಟಂತಿದೆ.ಮೊದಲಿಗೆ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಈಗಾಗಲೇ ಕಾರ್ಯಾಚರಣೆ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಶನಿವಾರವಷ್ಟೇ ಎನ್ಐಎ ತಂಡ ಪಂಜಾಬ್ನ ಚಂಡೀಗಢದಲ್ಲಿ ಹಾಗೂ ಅಮೃತಸರದಲ್ಲಿ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಮನೆಗಳನ್ನು ವಶಕ್ಕೆ ಪಡೆದಿದೆ. ಈತನ ವಿರುದ್ಧ ಭಾರತದಲ್ಲಿ ಒಟ್ಟು 22 ಪ್ರಕರಣಗಳು ಇದ್ದು, ಈ ಪೈಕಿ 3 ದೇಶದ್ರೋಹ ಕೆಸ್ಗಳೂ ಇವೆ. ಇತ್ತೀಚೆಗಷ್ಟೇ ಪನ್ನು ಕೆನಡಾದಲ್ಲಿ ಇರುವ ಹಿಂದೂಗಳಿಗೆ ಕೆನಡಾ ದೇಶ ತೊರೆಯುವಂತೆ ಕರೆ ನೀಡಿದ್ದ ಎನ್ನಲಾಗಿದೆ.
ಇದೀಗ ಭಾರತ ಪಟ್ಟಿ ಸಿದ್ದಪಡಿಸಿ ಹೆಸರಿಸಿರುವ ಖಲಿಸ್ತಾನ್ ಉಗ್ರರು, ಧರ್ಮದ ಹೆಸರಲಲಿ ಪಂಜಾಬ್ ಸೇರಿದಂತೆ ದೇಶದ ಹಲವೆಡೆ ಪ್ರತ್ಯೇಕತಾವಾದ ಹರಡುತ್ತಿದ್ದಾರೆ. ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಕುಳಿತುಕೊಂಡು ಪಂಜಾಬ್ ಸ್ವತಂತ್ರ ದೇಶವಾಗಬೇಕು ಎಂದು ಚಳವಳಿ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ತನಿಖಾ ಸಂಸ್ಥೆ ‘ರಾ’ RAW ನಿಗೂಢವಾಗಿ ಆ ದೇಶದ್ರೋಹಿ ಉಗ್ರರು ಇರುವ ದೇಶದಲ್ಲಿಯೇ ಅವರನ್ನು ಕೊನೆಗಾಣಿಸುತ್ತದೆಯಾ ಎಂದು ಹಲವು ತಜ್ಞರು ವಿಶ್ಲೇಷಣೆ ನಡೆಸುತ್ತಿದ್ದಾರೆ.