ನ್ಯೂಸ್ ನಾಟೌಟ್ :ಬಹು ವರ್ಷಗಳ ಕನಸು ಹಾಗೂ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ (Shiradi Ghat tunnel construction project) ಕೊನೆಗೂ ಹೊಸ ರೂಪ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ (Nalin Kumar Kateel) “ಶಿರಾಡಿಯಲ್ಲಿ ಹೆದ್ದಾರಿ ಬದಲು ಪರ್ಯಾಯ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಎರಡು ಬಾರಿ ಸಮೀಕ್ಷೆ ನಡೆಸಿದೆ ಎಂದರು.ಮೊದಲ ಸಮೀಕ್ಷೆಯಂತೆ 3000 ಕೋಟಿ ರೂ.ಗಳ ಡಿಪಿಆರ್ ಸಿದ್ಧಪಡಿಸಲಾಗಿದೆ.ಇದೀಗ ಎರಡನೇ ಸಮೀಕ್ಷೆಯಂತೆ 12500 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲಾಗಿದೆ. ಈಗ ಯೋಜನೆಯ ವಿನ್ಯಾಸವೇ ಬದಲಾಗಿ ಹೋಗಿದೆ ಎಂದು ಅಭಿಪ್ರಾಯ ಪಟ್ಟರು.
ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 2500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದು, 2024ರಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.ಶಿರಾಡಿ ಘಾಟಿಯ ಎರಡು ಕಡೆಗಳಲ್ಲಿ ಸುರಂಗ ಮತ್ತು ಇತರ ಪ್ರದೇಶಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು , ‘ಎಸ್ಸಿ ಮತ್ತು ಎಸ್ಟಿಗಳ ಜಮೀನು ಒತ್ತುವರಿ ಪ್ರಕರಣದಲ್ಲಿ ಸಚಿವ ಸುಧಾಕರ್ ಮೇಲೆ ಮಾಡಿರುವ ಆರೋಪದ ಬಗ್ಗೆ ಮುಖ್ಯಮಂತ್ರಿ ಮೌನವಾಗಿದ್ದಾರೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಸರ್ಕಾರ ಸರ್ವಾಧಿಕಾರಿಗಳು ಮತ್ತು ಹಗರಣಗಾರರಿಂದ ತುಂಬಿದೆ. ಸರ್ಕಾರವನ್ನು ಪ್ರಶ್ನಿಸುವ ಮಾಧ್ಯಮಗಳ ಮೇಲೆ ಕೇಸು ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.
ರೈತರ ಶೈಕ್ಷಣಿಕ ನಿಧಿಯನ್ನು ಹಿಂಪಡೆಯಲಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇರಿಸಿದ್ದ ಅನುದಾನವನ್ನು ಸರ್ಕಾರ ಹಿಂಪಡೆದಿದೆ. ಕಳೆದ ಮೂರು ತಿಂಗಳಲ್ಲಿ 275 ರೈತರು ತಮ್ಮ ಜೀವನವನ್ನೇ ಕತ್ತಲಾಗಿಸಿದರೂ ಸರಕಾರ ಮೌನವಾಗಿದೆ. ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.