ನ್ಯೂಸ್ ನಾಟೌಟ್: ಅಧಿಕಾರಿಯೊಬ್ಬರು ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಅಮಾನವೀಯ ಘಟನೆ ಆಗ್ರಾದ ಮಕ್ಕಳ ಆಶ್ರಯ ಕೇಂದ್ರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಆಗ್ರಾದ ಮಕ್ಕಳ ಆಶ್ರಯ ಕೇಂದ್ರದ ಅಧೀಕ್ಷಕ ಪೂನಂ ಪಾಲ್ ಅಪ್ರಾಪ್ತ ಕೈದಿಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಹಾಸಿಗೆಯ ಮೇಲೆ ಮಲಗಿದ ಬಾಲಕಿಗೆ ಕರುಣೆಯಿಲ್ಲದ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ ಎನ್ನಲಾಗಿದೆ. ಆಗ್ರಾದ ಅಪ್ರಾಪ್ತ ಅಪರಾಧಿ ಮಕ್ಕಳ ಬಾಲ ಗೃಹದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋದಲ್ಲಿ ಹೊಡೆದ ಅಧಿಕಾರಿ ಈ ಆಶ್ರಯ ಕೇಂದ್ರದ ಅಧಿಕೃತ ಸೂಪರಿಂಟೆಂಡೆಂಟ್ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರೊಬೇಷನರಿ ಅಧಿಕಾರಿ (ಡಿಪಿಒ) ಅವರಿಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್, ನಿರ್ದೇಶಕರು, ಲಕ್ನೋದಲ್ಲಿ ಮಹಿಳಾ ಕಲ್ಯಾಣ ಇಲಾಖೆಯ ಶಿಫಾರಸಿನ ಮೇರೆಗೆ ಡಿಪಿಒ ಮಕ್ಕಳ ಆಶ್ರಯಕ್ಕೆ ಭೇಟಿ ನೀಡಿದರು. ಬಳಿಕ ಅಧೀಕ್ಷಕ ಪೂನಂ ಪಾಲ್ ರನ್ನು ಅಮಾನತುಗೊಳಿಸಿದ್ದಾರೆ. ಮಂಗಳವಾರ ನಗರದ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಆಶ್ರಯ ಮನೆಗೆ ಭೇಟಿ ನೀಡಿದ ನಂತರ, ಡಿಪಿಒ ಬಾಲಕಿಯ ಮೇಲೆ ಚಪ್ಪಲಿಯಿಂದ ಥಳಿಸುವಿಕೆಯು ಸ್ವೀಕಾರಾರ್ಹವಲ್ಲ ಎಂದರು.
ವರದಿಗಳ ಪ್ರಕಾರ ಘಟನೆಯು ಸೆಪ್ಟೆಂಬರ್ 4ರಂದು ನಡೆದಿದೆ. ಮಕ್ಕಳ ಆಶ್ರಯದಲ್ಲಿರುವ ಇನ್ನೊಬ್ಬ ಅಧಿಕಾರಿ ಕ್ಯಾಮರಾದಲ್ಲಿ ಈ ಘಟನೆಯನ್ನು ಸೆರೆಹಿಡಿದಿದ್ದಾರೆ. ಹಾಸಿಗೆಯ ಮೇಲೆ ಮಲಗಿರುವ ಅಪ್ರಾಪ್ತ ಬಾಲಕಿಯನ್ನು ಸೂಪರಿಂಟೆಂಡೆಂಟ್ ಪೂನಂ ಪಾಲ್ ತನ್ನ ಚಪ್ಪಲಿಯಿಂದ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪಾಲ್ ಅವರ ಕ್ರಮಗಳ ಹಿಂದಿನ ಕಾರಣ ಮತ್ತು ಉದ್ದೇಶ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.