ನ್ಯೂಸ್ ನಾಟೌಟ್: ʻಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಒಬ್ಬ ಅರೆ ಹುಚ್ಚ (Half Mad) ಅಂಥವರನ್ನು ಜಿ20ಯಂಥ ಜಾಗತಿಕ (G20 Summit) ನಾಯಕರು ಬರುವ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೇಗೆ ಸಾಧ್ಯ?ʼ ಹೀಗೆಂದು ಹೇಳಿದವರು ಮತ್ಯಾರು ಅಲ್ಲ, ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ (Basanagowda pateel Yatnal)…!
ಹೌದು, ಹೊಸಪೇಟೆಗೆ ಆಗಮಿಸಿದ ವೇಳೆ ಯತ್ನಾಳ್ ಇಂತಹದ್ದೊಂದು ವಿಚಾರವನ್ನು ತಿಳಿಸಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20ಯಂಥ ಜಾಗತಿಕ ಶೃಂಗ ಸಭೆಗೆ ಅವರಿಗೆ ಏಕೆ ಆಹ್ವಾನ ನೀಡಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ʻʻಅವನು ದೇಶದ ಹೊರಗೆ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಾನೆ. ಅದೇ ರೀತಿ ಜಗತ್ತಿನ ಗಣ್ಯರ ಎದುರು ನಮ್ಮ ದೇಶ ಅತಂತ್ರ ಆಗಿದೆ ಅಂದ್ರೆ ಪರಿಸ್ಥಿತಿ ಏನಾಗುತ್ತೆ ಹೇಳಿ, ಅದಕ್ಕೇ ಆಹ್ವಾನ ಕೊಟ್ಟಿಲ್ಲʼʼ ಎಂದು ಹೇಳಿದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್ ʻʻಕೆಲವರು ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ ಅಂದಿದ್ದಾರೆ. ನಾನು ಹೇಳ್ತೇನೇ ಅಂತ ಹೇಳಿಕೆ ಕೊಟ್ಟವರೇ ಡೆಂಗ್ಯೂ, ಮಲೇರಿಯಾ ಪೀಡಿತರ ಹಾಗೆ ಇದ್ದಾರೆ. ಕೆಲವರು ಏಡ್ಸ್ ಹತ್ತಿದೋರ ತರಹ ಇದ್ದಾರೆʼʼ ಎಂದರು.
ʻʻಮುಲಾಯಂ ಸಿಂಗ್ ಕುಟುಂಬ, ಮಮತಾ ಬ್ಯಾನರ್ಜಿ ಕುಟುಂಬ ಹಂಗೆ ಇದ್ದಾವೆ. ನಮ್ಮ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬವೂ ಹಂಗೆ ಇದೆʼʼ ಎಂದು ಹೇಳಿದ ಅವರು ಮಲ್ಲಿಕಾರ್ಜುನ ಖರ್ಗೆ ಎಂದಾದರೂ ದಲಿತ ನಾಯಕರನ್ನು ಬೆಳೆಸಲು ನೋಡಿದ್ದಾರಾ? ತಮ್ಮ ಮಗನೇ ಮಂತ್ರಿ ಆಗಲಿ, ನನ್ನ ಮಗ ಅಷ್ಟೇ ಬೆಳೆಯಲಿ ಅಂತಾರೆ. ಇದನ್ನ ದಲಿತ ಸಮಾಜದವರು ಅರ್ಥ ಮಾಡಿಕೊಳ್ಳಬೇಕು ಎಂದು ಟೀಕಿಸಿದರು.