ನ್ಯೂಸ್ ನಾಟೌಟ್: ಲಯನ್ಸ್ ಕ್ಲಬ್ ಸಂಪಾಜೆ ಆಶ್ರಯದಲ್ಲಿ ಲಯನ್ಸ್ ಸೇವಾ ಭವನ ನಿರ್ಮಾಣದ ಸಹಯಾರ್ಥವಾಗಿ ಅರೆಭಾಷೆ ಸಂಸ್ಕೃತಿ ಮತ್ತು ಅಕಾಡೆಮಿ ಪ್ರಸ್ತುತ ಪಡಿಸಿದ ಅಪ್ಪ ಅರೆಭಾಷೆ ನಾಟಕ ಫೆ.28ರಂದು ಸಂಪಾಜೆ ಜೂನಿಯರ್ ಕಾಲೇಜಿನ ನಿಸರ್ಗ ರಂಗ ಮಂದಿರದಲ್ಲಿ ನಡೆಯಿತು.
ಲೋಕೇಶ್ ಊರುಬೈಲ್ ನಿರ್ದೇಶನದ ನಾಟಕದ ಉದ್ಘಾಟನೆಯನ್ನುಅರೆಭಾಷೆ ಅಕಾಡೆಮಿಯ ಸ್ಥಾಪಕಾಧ್ಯಕ್ಷ ದಿ. ಎನ್.ಎಸ್. ದೇವಿಪ್ರಸಾದ್ ಸಂಪಾಜೆ ರವರ ಧರ್ಮಪತ್ನಿ ಲ. ಇಂದಿರಾ ದೇವಿಪ್ರಸಾದ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಕರ್ಮಿ, ಕಾಂತಾರ ಚಲನಚಿತ್ರದ ಕಲಾವಿದ ಬಾಸುಮ ಕೊಡಗು, ಸಾಮಾಜಿಕ ಕಾರ್ಯಕರ್ತ ಹಾಗೂ ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಆಗಿನ ಪ್ರಧಾನ ಕಾರ್ಯದರ್ಶಿ ಅಶೋಕ ಎಡಮಲೆ, ಲಯನ್ ಪ್ರಾಂತೀಯ ರಾಯಭಾರಿ ಲ. ಜಯರಾಮ ದೇರಪ್ಪಜ್ಜನ ಮನೆ, ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲ. ಕಿಶೋರ್ ಕುಮಾರ್ ಕೆ, ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು, ಸಂಪಾಜೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಐತಪ್ಪ ಮಾಸ್ತರ್, ಅಪ್ಪ ನಾಟಕದ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಹೋರಾಟದಲ್ಲಿ ಭಾಗವಹಿಸಿದ ಸಂಪಾಜೆ ಲಯನ್ಸ್ ಕ್ಲಬ್ಬಿನ ಸದಸ್ಯರಾದ ಮತ್ತು ಆಗಿನ ಪ್ರಾಂತೀಯ ಅಧ್ಯಕ ಲ. ಸಂಧ್ಯಾ ಸಚಿತ್ ರೈ ಇವರನ್ನು ಹಾಗೂ ಸಂಪಾಜೆಯ ಕಲಾ ಪ್ರತಿಭೆ ಬಾಸುಮ ಕೊಡಗು ರವರನ್ನು ಅಭಿನಂದಿಸಲಾಯಿತು. ಸುಮಾರು 350ಕ್ಕಿಂತ ಅಧಿಕ ಕಲಾಸಕ್ತರ ಮಧ್ಯೆ ನಾಟಕವು ಅದ್ಭುತವಾಗಿ ಮೂಡಿ ಬಂದಿದ್ದು, ಜನರ ಮನ್ನಣೆ ಗಳಿಸಿತು. “ಜನರಲ್ಲಿ ಸಿಹಿ ಮುಕ್ತ ಜೀವನ ಸಕ್ಕರೆ ಖಾಯಿಲೆಯಿಂದ ದೂರ” ಎಂಬ ಅರಿವು ಮೂಡಿಸಲು ಎಲ್ಲಾ ವೀಕ್ಷಕರಿಗೆ ನೀರಿನ ಬಾಟಲ್ ಹಾಗೂ ಡ್ರೈ ಗೋಡಂಬಿ ಮತ್ತು ಬಾದಾಮಿ ಹೊಂದಿರುವ ಪೊಟ್ಟಣವನ್ನು ವಿತರಿಸಲಾಯಿತು. ಲಯನ್ ಸೇವಾ ಭವನದ ನಿರ್ಮಾಣದ ಸಹಾಯಾರ್ಥವಾಗಿ ಮಾಡಿದ ಗೌರವ ಕೂಪನಿನ ಲಕ್ಕಿಡ್ರಾ ನಡೆದು ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ಕೊನೆಗೆ ವೀಕ್ಷಕರ ನಡುವೆ ಕಥಾವಸ್ತುವಿನ ಬಗ್ಗೆ ಸಂವಾದವನ್ನು ಲಯನ್ಸ್ ಅಧ್ಯಕ್ಷರು ನಡೆಸಿದರು. ಇದರಲ್ಲಿ ಲ. ದೀಪಕ್ ಕುತ್ತಮೊಟ್ಟೆ, ಚಿದಾನಂದ ಮಾಸ್ತರ್, ಲೋಕ್ಯಾ ನಾಯ್ಕ್, ಲ. ಆಂಟನಿ ಮುಂತಾದವರು ತಮ್ಮ ಅನಿಸಿಕೆ ಹಂಚಿಕೊಂಡರು.













