ನ್ಯೂಸ್ ನಾಟೌಟ್: ಅಕ್ರಮವಾಗಿ ಗೋ ಹತ್ಯೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 56 ಕೆ.ಜಿ ಗೋಮಾಂಸ ಪತ್ತೆಯಾಗಿದೆ.
ಫೆ.26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಾರ್ಯ ಗ್ರಾಮ ಹೊಸವಕ್ಲು ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಗೋಮಾಂಸ ಕಡಿಯುತ್ತಿರುವ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ ಐ ಸುತೇಶ್ ಅವರು ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದಾಗ ಅಬ್ದುಲ್ ರಹಿಮಾನ್ ಎಂಬುವವರ ಮನೆಯ ಆವರಣದಲ್ಲಿದ್ದ ಇಬ್ಬರು ಓಡಿ ಹೋಗಿದ್ದಾರೆ.
ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿರುತ್ತದೆ. ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ಆಟೋ ರಿಕ್ಷಾ, ಮೊಬೈಲ್ ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2026, ಕಲಂ: 4, ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:3(5)) BNS 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಆರೋಪಿ ಹೆಚ್ ಅಬ್ದುಲ್ ರಹಿಮಾನ್ ಎಂಬವರು ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿರುತ್ತದೆ.













