ನ್ಯೂಸ್ ನಾಟೌಟ್ : ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಮಹತ್ವದ ಸೇವೆ ಆರಂಭವಾಗಿದೆ. ಕೇವಲ ಮಹಿಳೆಯರಿಗಾಗಿಯೇ ಇದೀಗ ‘ಸಖಿ ಆಟೋ’ ಸೇವೆ ರಸ್ತೆಗಿಳಿದಿದ್ದು, ಆಟೋಗಳಿಗಾಗಿ ಪರದಾಡುವ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸುವ ಮಹಿಳೆಯರಿಗೆ ಇದು ವರದಾನವಾಗಲಿದೆ.
ನಗರದಲ್ಲಿ ಈಗಾಗಲೇ 2,000 ಸಖಿ ಆಟೋಗಳು ಕಾರ್ಯಾಚರಣೆ ಆರಂಭಿಸಿವೆ.
ವಿಶೇಷತೆಗಳೇನು?
ಬೆಂಗಳೂರಿನಲ್ಲಿ ಸದ್ಯ 2,000 ಸಖಿ ಆಟೋಗಳು ಸಂಚರಿಸುತ್ತಿವೆ. ಸದ್ಯಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಆಟೋಗಳು ಸೇವೆ ನೀಡಲಿವೆ. ಮಹಿಳೆಯರಿಗೆ ಸುರಕ್ಷಿತ ಮತ್ತು ನೆಮ್ಮದಿಯ ಪ್ರಯಾಣ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ದಿನದ 24 ಗಂಟೆಯೂ (24/7) ಸೇವೆ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಬುಕ್ ಮಾಡುವುದು ಹೇಗೆ?
ಸಖಿ ಆಟೋವನ್ನು ಬಹಳ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ಬುಕ್ ಮಾಡಬಹುದು.ವಾಟ್ಸಾಪ್ ಮೂಲಕ: ಗ್ರಾಹಕರು 6361933364 ಸಂಖ್ಯೆಗೆ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ಆಟೋ ಬುಕ್ ಮಾಡಬಹುದು.
ವೆಬ್‌ಸೈಟ್ ಮೂಲಕ: ride.sakhiwomen.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿಯೂ ಆಟೋ ಕಾಯ್ದಿರಿಸಬಹುದು.
ಪ್ರಯಾಣ ದರ
- ಸಾಮಾನ್ಯ ಆಟೋಗಳ ದರಕ್ಕೂ ಮತ್ತು ಸಖಿ ಆಟೋ ದರಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ಹೇಳಲಾಗಿದೆ.
- ಕನಿಷ್ಠ ದರ: ಮೊದಲ 2 ಕಿಲೋಮೀಟರ್‌ಗೆ 50 ರೂ. ನಿಗದಿಪಡಿಸಲಾಗಿದೆ.
- ನಂತರದ ದರ: ಆನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ. ದರವಿರುತ್ತದೆ.
- ಮಳೆಗಾಲದಲ್ಲಿ ಹಾಗೂ ಪೀಕ್ ಅವರ್‌ಗಳಲ್ಲಿ (ಹೆಚ್ಚು ಟ್ರಾಫಿಕ್ ಇರುವ ಸಮಯ) ದರದಲ್ಲಿ ಏರಿಕೆ ಅಥವಾ ಬದಲಾವಣೆಗಳಾಗುವ
- ಸಾಧ್ಯತೆ ಇದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ಆರಂಭವಾಗಿರುವ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.













