ನ್ಯೂಸ್ ನಾಟೌಟ್ : ಮಕ್ಕಳಿಗೆ ಕಾಲ್ಗೆಜ್ಜೆ ಹಾಕುವುದರ ಹಿಂದಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ರಹಸ್ಯಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮಕ್ಕಳಿಗೆ ಕಾಲ್ಗೆಜ್ಜೆಗಳನ್ನು ಹಾಕುವುದರ ಮಹತ್ವವನ್ನು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ಪರಿಶೀಲಿಸಿದಾಗ, ಹಲವು ವಿಶೇಷತೆಗಳು ಕಂಡುಬರುತ್ತವೆ.
ವೈಜ್ಞಾನಿಕವಾಗಿ, ಈ ಕಾಲ್ಗೆಜ್ಜೆಗಳು ಮಗುವಿನ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ರೂಪಿಸುತ್ತವೆ. ಯಾವುದೇ ಋಣಾತ್ಮಕ ಶಕ್ತಿಗಳು ಮಗುವಿನ ದೇಹವನ್ನು ಪ್ರವೇಶಿಸದಂತೆ ಕಾಪಾಡುತ್ತವೆ. ಅಲ್ಲದೆ, ಪುಟ್ಟ ಮಕ್ಕಳ ಚರ್ಮ ಸೂಕ್ಷ್ಮವಾಗಿರುವುದರಿಂದ, ಸಣ್ಣ ಬ್ಯಾಕ್ಟೀರಿಯಾಗಳು ಅಥವಾ ಕ್ರಿಮಿಕೀಟಗಳು ಮಗುವನ್ನು ಸ್ಪರ್ಶಿಸದಂತೆ ಇವು ದೂರವಿಡಲು ಸಹಾಯಕವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಬೆಳ್ಳಿ ಚಂದ್ರನ ಲೋಹವಾಗಿದ್ದು, ಇದು ಮಗುವಿನ ಅಳು ಕಡಿಮೆ ಮಾಡಲು ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಎಂದು ನಂಬಲಾಗಿದೆ. ಆಯುರ್ವೇದದಲ್ಲೂ ಬೆಳ್ಳಿಯ ಬಳಕೆಗೆ ತನ್ನದೇ ಆದ ಮಹತ್ವವಿದೆ. ಕೈಗಳಿಗೆ ಕಪ್ಪು ಮಣಿಯ ಕಡಗಗಳಂತೆಯೇ ಕಾಲುಗಳಿಗೆ ಬೆಳ್ಳಿ ಚೈನುಗಳು ಧನಾತ್ಮಕ ಶಕ್ತಿಗಳನ್ನು ರವಾನಿಸುತ್ತವೆ.
ಧಾರ್ಮಿಕವಾಗಿ, ಕಾಲ್ಗೆಜ್ಜೆಗಳು ಬಹಳಷ್ಟು ಶುಭ ವಾತಾವರಣವನ್ನುಂಟು ಮಾಡುತ್ತವೆ. ಇವು ನಮ್ಮ ಸಂಪ್ರದಾಯ, ಪರಂಪರೆ ಮತ್ತು ಸನಾತನ ಧರ್ಮದ ಭಾಗವಾಗಿದೆ. ಮಗು ಮಲಗಿದಾಗ ಅಥವಾ ಚಲಿಸಿದಾಗ ಕಾಲ್ಗೆಜ್ಜೆಯ ಸದ್ದು ತಾಯಿಗೆ ಮಗು ಎದ್ದಿದೆಯೇ ಅಥವಾ ಸುರಕ್ಷಿತವಾಗಿದೆಯೇ ಎಂದು ಎಚ್ಚರಿಸಲು ಸಹಾಯಕ. ಇದು ಮಗುವಿನ ಸುರಕ್ಷತೆಗೆ ಪೂರಕವಾಗಿದೆ. ಪ್ರಥಮವಾಗಿ, ಮಗು ಈ ಸದ್ದನ್ನು ಕೇಳಿಸಿಕೊಳ್ಳುವ ಮೂಲಕ ಶ್ರವಣ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ. ಇದರ ಜೊತೆಗೆ, ದೃಷ್ಟಿಶಕ್ತಿಯೂ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಆದರೆ, ಕಾಲ್ಗೆಜ್ಜೆಗಳನ್ನು ಆಯ್ಕೆ ಮಾಡುವಾಗ ಒಂದನ್ನು ಗಮನಿಸಬೇಕು. ಚಿಕ್ಕ ಗೆಜ್ಜೆಗಳಿರುವ ಕಾಲು ಚೈನುಗಳನ್ನು ಮಕ್ಕಳು ಬಾಯಿಗೆ ಹಾಕಿಕೊಂಡಾಗ ಗೆಜ್ಜೆಗಳು ದೇಹದೊಳಗೆ ಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಪುಟ್ಟ ಮಕ್ಕಳಿಗೆ ಸರಳವಾದ, ಗೆಜ್ಜೆಗಳಿಲ್ಲದ ಕಾಲು ಚೈನುಗಳನ್ನು ಹಾಕುವುದು ಉತ್ತಮ. ಕಾಲ್ಗೆಜ್ಜೆಗಳನ್ನು ದಾನ ಮಾಡುವುದರಿಂದಲೂ ಶುಭ ಫಲ ಸಿಗುತ್ತದೆ. ಮಕ್ಕಳಿಗೆ ಇದನ್ನು ಹಾಕುವುದರಿಂದ ಚೈತನ್ಯ ವೃದ್ಧಿಯಾಗಿ, ಶಕ್ತಿ ಬರುತ್ತದೆ ಎಂದು ಗುರೂಜಿ ಹೇಳಿದ್ದಾರೆ.













