ನ್ಯೂಸ್ ನಾಟೌಟ್: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು ಹಾಗೂ ನ್ಯಾಯಾಲಯದ ನಡಾವಳಿ ಕುರಿತ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಸಾಂವಿಧಾನಿಕವಾಗಿ ನೀಡಿರುವುದಾಗಿದೆ. ಅಂತಹ ಯಾವುದೇ ವರದಿಯನ್ನು ಮಾನನಷ್ಟ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಂಗಳೂರಿನ ಜಯಕಿರಣ ಪತ್ರಿಕೆ ಹಾಗೂ ನಮ್ಮ ಟಿವಿ ಮಾಲೀಕರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಏನಿದು ಘಟನೆ..?
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಹಲ್ಲೆ ದೂರಿಗೆ ಸಂಬಂಧಿಸಿ 2015ರಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಡ್ಯ ಮೂಲದ ಬಿ. ಮಂಜುನಾಥ್ ಎಂಬಾತನನ್ನು ಬಂಧಿಸಿದ್ದರು. ಈ ಬಂಧನ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಮಾಧ್ಯಮ ವರದಿಯಿಂದ ಮಾನನಷ್ಟವಾಗಿದೆ ಎಂದು ಮಾಧ್ಯಮ ಸಂಸ್ಥೆಗಳ ಮಾಲೀಕರ ವಿರುದ್ಧ ಮಂಡ್ಯದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಿ ಖಾಸಗಿ ದೂರು ದಾಖಲಿಸಿದ್ದ. ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಮಾಧ್ಯಮ ಸಂಸ್ಥೆಗಳ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಪ್ರಕರಣದಲ್ಲಿ ಆರೋಪಿ ಬಂಧನಕ್ಕೊಳಗಾಗಿರುವುದು ಮತ್ತು ಆತನ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ಅಧಿಕೃತ ದಾಖಲೆಗಳಿಂದ ಸಾಬೀತಾಗಿದೆ. ಹಾಗಿರುವಾಗ ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳ ಮೇಲೆ ಮಾನನಷ್ಟ ಆರೋಪ ಹೊರಿಸುವುದು ತರ್ಕಬದ್ಧವಲ್ಲ ಎಂದು ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ಬರುವ ವಿನಾಯಿತಿ ಉಲ್ಲೇಖಿಸಿರುವ ನ್ಯಾಯಪೀಠ ನ್ಯಾಯಾಲಯದ ನಡಾವಳಿ ಬಗ್ಗೆ ಸತ್ಯ ಮತ್ತು ನಿಖರವಾದ ವರದಿ ಪ್ರಕಟಿಸುವುದು ಮಾನನಷ್ಟವಾಗುವುದಿಲ್ಲ. ಇದು ಸಾರ್ವಜನಿಕರಿಗೆ ಮಾಹಿತಿ ನೀಡುವ ಮಾಧ್ಯಮಗಳ ಕರ್ತವ್ಯದ ಭಾಗವಾಗಿದೆ ಎಂದು ಹೇಳಿದೆ.













