ನ್ಯೂಸ್ ನಾಟೌಟ್: ಕರ್ಮ ಫಲಗಳು ಮನುಷ್ಯನ ಜೀವನದಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತವೆ. ಒಳ್ಳೆಯದ್ದನ್ನೇ ಮಾಡುವುದು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸದಿರುವುದು, ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡೋದರಿಂದ ತಕ್ಷಣಕ್ಕೆ ಫಲ ಸಿಗಲಿಕ್ಕಿಲ್ಲ, ಆದರೆ ಮುಂದೊಂದು ದಿನ ನಿಮ್ಮನ್ನು ನಿಮ್ಮ ಕುಟುಂಬವನ್ನು ಕಷ್ಟ ಕಾಲದಲ್ಲಿ ಕಾಪಾಡುವುದು ನೀವು ಮಾಡಿದ ಈ ಪುಣ್ಯ ಕೆಲಸಗಳೇ ಅನ್ನೋದನ್ನು ಮರೆಯಬಾರದು.
ಹೌದು, ಸುಳ್ಯದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸೂಂತೋಡು ಎಂಪೋರಿಯಂನಲ್ಲಿ ಕಳೆದ 2 ದಿನಗಳಿಂದ ಭಿಕ್ಷುಕನೊಬ್ಬ ಅನಾರೋಗ್ಯದಿಂದ ಬಿದ್ದಿದ್ದ. ಮೈಯಲ್ಲಿ ಗಾಯ, ಅಸಹ್ಯ ಹುಟ್ಟಿಸುವ ದುರ್ನಾತ ಬೀರುತ್ತಿದ್ದ. ಇದನ್ನು ನೋಡಿದ ಸೂಂತೋಡು ಮಾಲೀಕ ಸೂರಯ್ಯ ಗೌಡರು ಸುತ್ತಮುತ್ತಲಿನ ಎಲ್ಲ ಆಡಳಿತ ವರ್ಗಗಳಿಗೂ ‘ಒಂದು ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಿ, ಸಕಾಲಕ್ಕೆ ನೀವು ಬಂದರೆ ಈತನ ಜೀವ ಉಳಿಯಬಹುದು’ ಎಂದು ಮನವಿ ಮಾಡಿದರು. ಗೌಡರ ಮನವಿಗೆ ಎಲ್ಲಿಂದಲೂ ಸ್ಪಂದನೆ ಸಿಗಲಿಲ್ಲ. ಹತ್ತಾರು ಮಂದಿಗೆ ಫೋನ್ ಮಾಡಿದರು ಫಲ ಕೊಡಲಿಲ್ಲ. ತಕ್ಷಣ ಅವರು ಸುಳ್ಯದ ಪ್ರೀತಿ ಮೊಬೈಲ್ ನ ಸಿಬ್ಬಂದಿ ಶೈಲೂ ಅವರಿಗೆ ತಿಳಿಸಿದರು. ಅವರು ಸ್ನೇಹಿತ ಸುಳ್ಯದ ಆಪತ್ಪಾಂಧವ ಪ್ರಗತಿ ಆಂಬ್ಯುಲೆನ್ಸ್ ಮಾಲೀಕ ಅಚ್ಚು ಅವರಿಗೆ ತಿಳಿಸಿದರು. ವಿಷಯ ತಿಳಿದ ತಕ್ಷಣ ಅಚ್ಚು ಆಂಬ್ಯುಲೆನ್ಸ್ ನೊಂದಿಗೆ ಸ್ಥಳಕ್ಕೆ ಬಂದರು. ಸ್ವತಃ ಸೂರಯ್ಯ ಗೌಡರು ಕೂಡ ಅಚ್ಚು ಅವರೊಂದಿಗೆ ಸೇರಿಕೊಂಡು ಆ ಭಿಕ್ಷುಕನನ್ನು ಆಂಬ್ಯುಲೆನ್ಸ್ ಗೆ ಹಾಕಲು ನೆರವಾದರು. ಸುಳ್ಯದ ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ಲೀಲಾಧರ್, ರವಿ ಹಾಗೂ ದಯಾನಂದ ಭಿಕ್ಷುಕನನ್ನು ಚೆನ್ನಾಗಿ ಸ್ನಾನ ಮಾಡಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿಗಳು, ನರ್ಸ್ ಸಿಬ್ಬಂದಿ ಚಿಕಿತ್ಸೆಯಲ್ಲಿ ನೆರವಾದರು. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಭಿಕ್ಷುಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ.













