ನ್ಯೂಸ್ ನಾಟೌಟ್ : ವಿವಾಹಿತ ಮಹಿಳೆಯೊಬ್ಬಳು ಗುರೂಜಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ ವಿಚಾರವಾಗಿ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ.
ಸುಚಿತ್ರಾ ಎಂಬ ಮಹಿಳೆ ಶಿವಮೊಗ್ಗ ಮೂಲದ ಕಮಲಾಕರ ಭಟ್ ಗುರೂಜಿ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಕಮಲಾಕರ್ ಮೂಲತಃ ಸಿದ್ದಾಪುರ ಮೂಲದ ಹೆಮ್ಮನಬೈಲ್ ಗ್ರಾಮದವರು. ಗುರೂಜಿ ಜೊತೆ ತಾಯಿಯ ಅಕ್ರಮ ಸಂಬಂಧದ ವಿಚಾರ ಸುಚಿತ್ರಾ ಪುತ್ರಿಗೆ ಗೊತ್ತಾಗಿದ್ದು, ವಿಚಾರವನ್ನು ತಂದೆ ಮಹೇಶ್ ನಾಯ್ಕಗೆ ಆಕೆ ತಿಳಿಸಿದ್ದಳು. ಇದೇ ವಿಚಾರವಾಗಿ ಮಹೇಶ್ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ಕಾರಣ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರನಿಂದ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಘಟನೆ ಸಂಬಂಧ ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಗುರೂಜಿ ಸೇರಿ 7 ಜನರನ್ನು ಪೊಲೀಸರು ವಶಕ್ಕೆ ವಡೆದಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಅಪರಿಚಿತರು ಹಾಗೂ ಎ4 ಕಮಲಾಕರ ಭಟ್ ಸ್ವಾಮೀಜಿ ಆಗಿದ್ದು, ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













