ನ್ಯೂಸ್ ನಾಟೌಟ್: ಸದನದಲ್ಲಿ ಕೆಲವೊಂದು ಸಲ ಚೀರಾಟ, ಕಿರುಚಾಟ, ಗಲಾಟೆ -ಗದ್ದಲ ನಡೆಯುವುದನ್ನು ನೋಡಿದ್ದೇವೆ. ಅಪರೂಪದ ಸನ್ನಿವೇಶದಲ್ಲಿ ಹಾಸ್ಯದ ಹೊನಲು ಕೂಡ ಹರಿದು ಸದನದ ಸದಸ್ಯರೆಲ್ಲ ನಗೆಗಡಲಲ್ಲಿ ತೇಲುವ ಸನ್ನಿವೇಶವೂ ಇದೆ. ಅಂತಹುದೇ ಒಂದು ವಾತಾವರಣ ವಿಧಾನಸಭೆಯ ಚರ್ಚೆಯಲ್ಲಿ ಗುರುವಾರ ನಡೆಯಿತು. ಎಚ್.ಡಿ ರೇವಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಕಾಲೆಳೆದಿದ್ದಕ್ಕೆ ಇಡೀ ಸದನ ನಗೆಗಡಲಲ್ಲಿ ತೇಲಿತು.
ಇಂದು ಸದನದಲ್ಲಿ ಕೆಲವೊಂದು ಮಹತ್ವದ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭ ಕೊಬ್ರಿ ಹಿಡಿದು ಸದನಕ್ಕೆ ಆಗಮಿಸಿದ ಶಾಸಕ ಎಚ್.ಡಿ ರೇವಣ್ಣ ತೆಂಗು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು. ಕೊಬ್ಬರಿ ಬೆಳೆಗಾರರಿಗೆ 15000 ರೂ.ಕೊಡ್ತಿನಿ ಎಂದ ಹಣ ಇನ್ನೂ ಬಂದಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಸದನದಲ್ಲಿ ಕೊಬ್ರಿ ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ಗೆ ಕೊಬ್ರಿ ಕಳಿಸಿಕೊಡ್ತೀನಿ ಎಂದು ರೇವಣ್ಣ ಹೇಳಿದರು. ಈ ಸಂದರ್ಭ ಎದ್ದು ನಿಂತ ಮುಖ್ಯಮಂತ್ರಿ”ಹೇ ರೇವಣ್ಣ ನಿಂಬೆಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ರಿ ಯಾಕಪ್ಪ ಹಿಡ್ಕೊತ್ತಿಯಾ” ಎಂದು ಕಾಲೆಳೆದ ಪ್ರಸಂಗ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸ್ವೀಕರ್ ಖಾದರ್, “ರೇವಣ್ಣ ಇಲ್ಲಿ ಕೊಡಿ .. ನನಗಾದ್ರೂ ಎರಡು ಕೊಬ್ರಿಯಾದ್ರು ತಂದ್ರಲ್ವ ಎಂದು ಮತ್ತೆ ಕಾಲೆಳೆದರು.
ಕಳೆದ ವಾರ ಕೂಡ ಕೊಬ್ಬರಿ ಬೆಳೆಗಾರರ ಬೆಂಬಲ ಬೆಲೆಯ ಬಗ್ಗೆ ಚರ್ಚೆ ನಡೆದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಕೊಬ್ಬರಿಗೆ ನೀಡುತ್ತಿದ್ದ ಬೆಂಬಲ ಬೆಲೆ ಸ್ಥಗಿತಗೊಳಿಸಿದೆ ಎಂದು ಶಿವಲಿಂಗೇಗೌಡ ಆರೋಪಿಸಿದ್ದರು. ತಕ್ಷಣ ಮಧ್ಯೆ ಪ್ರವೇಶಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ 15 ಸಾವಿರ ರೂ. ನೀಡಿ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಪತ್ರಿಕೆಯೊಂದರ ವರದಿಯನ್ನು ಸದನಲ್ಲಿ ಪ್ರದರ್ಶಿಸಿ ತಿರುಗೇಟು ನೀಡಿದ್ದರು. ಇದೀಗ ಗುರುವಾರ ಸದನದಲ್ಲಿ ಎಚ್.ಡಿ. ರೇವಣ್ಣ ಸದನಕ್ಕೆ ಕೊಬ್ಬರಿಯನ್ನು ಹಿಡಿದುಕೊಂಡು ಬಂದು ಸದನದಲ್ಲಿ ಪ್ರದರ್ಶಿಸಿ ಮತ್ತೆ ಕೊಬ್ಬರಿ ಬೆಂಬಲ ಬೆಲೆ ವಿಚಾರವನ್ನು ಸರ್ಕಾರಕ್ಕೆ ನೆನಪಿಸಿದರು.