ಭಾಗಮಂಡಲ: ನಾಡಿನ ಜೀವನದಿ ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.11 ಗಂಟೆಗೆ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ. ಪವಿತ್ರ ತೀರ್ಥೋದ್ಭವಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಕಾವೇರಿ ತುಲಾಸಂಕ್ರಮಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಪವಿತ್ರ ತೀರ್ಥೋದ್ಭವದ ವೀಕ್ಷಣೆಗೆ ತೆರಳುವ ಭಕ್ತರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತಾದರೂ, ಭಕ್ತಾದಿಗಳ ಒತ್ತಡಕ್ಕೆ ಮಣಿದ ಸರಕಾರ ಬಳಿಕ ಷರತ್ತುಗಳನ್ನು ಸಡಿಲಗೊಳಿಸಿ ಮುಕ್ತ ಅವಕಾಸ ಕಲ್ಪಿಸಿದೆ.ಆದರೆ ಪ್ರತಿಯೊಬ್ಬರೂ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ತೀರ್ಥಸ್ನಾನಕ್ಕೆ ಅವಕಾಶವಿಲ್ಲ:
ಭಕ್ತಾದಿಗಳು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮಾತ್ರ ತೀರ್ಥಸ್ನಾನ ಮಾಡಲು ಅವಕಾಶ ನೀಡಲಾಗಿದ್ದು, ತಲಕಾವೇರಿಯ ಕೊಳದಲ್ಲಿ ಸ್ನಾನಕ್ಕೆ ಅವಕಾಶವಿರುವುದಿಲ್ಲ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸ್ವಯಂಸೇವಕರ ಮೂಲಕ ತೀರ್ಥ ವಿತರಣೆಗೆ ಕ್ರಮವಹಿಸಲಾಗಿದೆ. ಈ ಹಗಲು ವೇಳೆ ತೀರ್ಥೋದ್ಭವವಾಗಲಿರುವುದರಿಂದ ಹಾಗೂ ದಸರಾ ಸೇರಿದಂತೆ ಸಾಲುಸಾಲು ರಜೆಗಳು ಒಟ್ಟಾಗಿ ಬಂದಿರುವಿದರಿಂದ ತೀರ್ಥೋದ್ಭವದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕಾಟಕೇರಿ ಬಳಿ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಾಗಮಂಡಲದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.