ನ್ಯೂಸ್ ನಾಟೌಟ್ : ಮಡಿಕೇರಿ ಅಂದಾಕ್ಷಣ ಥಟ್ಟನೆ ನೆನಪಾಗೋದು ರಾಜಾಸೀಟ್. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲ. ಇತಿಹಾಸ ಪ್ರಸಿದ್ಧವಾದ ಈ ಸ್ಥಳ ವೀಕ್ಷಿಸಲೆಂದೇ ದೇಶದ ನಾನಾ ಕಡೆಗಳಿಂದ ಬಂದು ಈ ಸುಂದರ ತಾಣವನ್ನು ವೀಕ್ಷಿಸಿ ಎಂಜಾಯ್ ಮಾಡುತ್ತಾರೆ. ಇದರ ಜತೆ ಜತೆಗೆ ರಾಜಾಸೀಟ್ ಉದ್ಯಾನಕ್ಕೆ ಬಂದವರು ಇಲ್ಲಿನ ವಿಶೇಷ ಬಗೆಯ ಆಲೂಗಡ್ಡೆ ಚಿಪ್ಸ್, ಗೋಬಿ ಮಂಚೂರಿ, ಪಾನಿಪೂರಿ ಸವಿಯದೆ ಹೋಗುತ್ತಿರಲಿಲ್ಲ. ವ್ಯಾಪಾರಸ್ಥರಿಗೂ ಶನಿವಾರ ಮತ್ತು ಭಾನುವಾರಗಳಂದು ಇಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ವ್ಯಾಪಾರವೂ ಬಲು ಜೋರು ನಡೆಯುತಿತ್ತು.
ಇದೀಗ ಉದ್ಯಾನದ ಎದುರು ಇದ್ದ ಎಲ್ಲ ವ್ಯಾಪಾರಿಗಳನ್ನು ನಗರಸಭೆ ಮಂಗಳವಾರ ತೆರವುಗೊಳಿಸಿದೆ. ಇನ್ನು ಮುಂದೆ ಅನಧಿಕೃತವಾಗಿ ಇಲ್ಲಿ ವ್ಯಾಪಾರ ಮಾಡಬಾರದು ಎಂಬ ಸೂಚನೆಯನ್ನೂ ನೀಡಿದೆ.
ಇಲ್ಲಿನ ವ್ಯಾಪಾರಿಯೊಬ್ಬರಿಗೂ, ರಾಜಾಸೀಟ್ ಉದ್ಯಾನದ ಭದ್ರತಾ ಸಿಬ್ಬಂದಿಗೂ ಹೊಡೆದಾಟ ನಡೆದಿತ್ತು. ಪರಸ್ಪರ ದೂರು ದಾಖಲಾಗಿತ್ತು. ಪ್ರವಾಸಿ ತಾಣಗಳಲ್ಲಿ ಪದೇ ಪದೆ ನಡೆಯುತ್ತಿರುವ ಹೊಡೆದಾಟಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದು, ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
30 ವರ್ಷಗಳ ಹಿಂದೆ ರಾಜಾಸೀಟ್ ಉದ್ಯಾನದ ಎದುರು 6 ಮಂದಿ ವ್ಯಾಪಾರ ಮಾಡುತ್ತಿದ್ದರು.
ಅದು ಬರುಬರುತ್ತ ಅವರ ಸಂಖ್ಯೆ 20ನ್ನು ದಾಟಿತು. ಇವರು ಯಾರೂ ತೋಟಗಾರಿಕಾ ಇಲಾಖೆಗಾಗಲಿ, ನಗರಸಭೆಗಾಗಲಿ ತೆರಿಗೆ ಪಾವತಿಸುತ್ತಿರಲಿಲ್ಲ. ಇವರು ಅಧಿಕೃತವಾಗಿಯೂ ಇಲ್ಲಿ ಮಳಿಗೆ ಇಟ್ಟವವರಲ್ಲ. ಸಮೀಪದಲ್ಲಿ ಎಲ್ಲೂ ತಿನಿಸುಗಳ ಮಳಿಗೆಗಳು ಇಲ್ಲದ ಕಾರಣ ಜಿಲ್ಲಾಡಳಿತ ಇದುವರೆಗೂ ವ್ಯಾಪಾರಕ್ಕೆ ಅನಧಿಕೃತವಾಗಿಯೇ ಒಪ್ಪಿಗೆ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಮೂಲ ಕಾರಣ ವ್ಯಾಪಾರಿಯೊಬ್ಬರು ಹೊಡೆದಾಟದಲ್ಲಿ ಭಾಗಿಯಾದ ಪ್ರಕರಣ. ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಎಲ್ಲ ವ್ಯಾಪಾರಸ್ಥರನ್ನು ತೆರವುಗೊಳಿಸಿದೆ.
ಮೊದಲು ಮಳಿಗೆಗಳನ್ನು ತೆರವುಗೊಳಿಸಲು ಗಡುವು ನೀಡಿದ ನಗರಸಭೆ ಅಧಿಕಾರಿಗಳು, ಅವರ ಆದೇಶಕ್ಕೆ ಒಲ್ಲದ ಮನಸ್ಸಿನಿಂದ ಮಣಿದು ತಮ್ಮ ತಮ್ಮ ಮನೆಗಳತ್ತ ಹೊರಟರು. ಅಂಗಡಿ ತೆರವು ಮಾಡುತ್ತಲೇ ಮಾತನಾಡಿದ ವ್ಯಾಪಾರಿಯೊಬ್ಬರು, ‘ನಮ್ಮನ್ನು ಇದುವರೆಗೂ ಯಾರೊಬ್ಬರೂ ಬಂದು ತೆರಿಗೆ ಕೇಳಿಲ್ಲ. ನಾವು ಕೊಡುವುದಿಲ್ಲ ಎಂದೂ ಹೇಳುತ್ತಿಲ್ಲ. ಆದರೆ, ಯಾರೋ ಮಾಡಿದ ತಪ್ಪಿಗೆ ಎಲ್ಲರ ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ಮನವಿ ಮಾಡಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ‘ರಾಜಾಸೀಟ್ ಮುಂದೆ ಇರುವ ಎಲ್ಲ ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸಲಾಗುವುದು. ಕೆಲವೇ ದಿನಗಳಲ್ಲಿ ಅಭಿವೃದ್ಧಿಪಡಿಸಿ ಸರ್ಕಾರದ ನಿಯಮಾವಳಿಯಂತೆ ಟೆಂಡರ್ ಮೂಲಕ ಬಾಡಿಗೆಗೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.