ನ್ಯೂಸ್ ನಾಟೌಟ್ : ಪುತ್ತೂರು ಮೂಲದ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ದಾಖಲಾಗಿರುವ ಲವ್–ಸೆಕ್ಸ್–ದೋಖಾ ಪ್ರಕರಣವು ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆಯುತ್ತಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಎಂಬ ಯುವಕನ ವಿರುದ್ಧ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಗರ್ಭಿಣಿಯಾಗಿಸಿ ನಂತರ ವಂಚಿಸಿದ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸಂತ್ರಸ್ತೆಯು ಮಗುವಿಗೆ ಜನ್ಮ ನೀಡಿ ಆರು ತಿಂಗಳು ಕಳೆದರೂ ನ್ಯಾಯ ಸಿಗದೇ ಇರುವುದರಿಂದ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾಳೆ.
ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಮದುವೆ ಭರವಸೆಯ ಮೇಲೆ ಆತನೊಂದಿಗೆ ಬದುಕಿನ ಕನಸು ಕಂಡಿದ್ದ ಯುವತಿ ಗರ್ಭವತಿಯಾಗಿದ್ದರೂ, ನಂತರ ಆರೋಪಿ ತನ್ನ ಮಾತಿನಿಂದ ಹಿಂದೆ ಸರಿದಿದ್ದಾನೆ. ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕವೂ ಕೃಷ್ಣ ರಾವ್ ಮದ್ವೆ ಆಗಲು ಸಿದ್ಧನಿಲ್ಲ.
ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕೃಷ್ಣ ರಾವ್ ಅನ್ನು ಬಂಧಿಸಲಾಗಿತ್ತು. ಆದರೆ ಬಂಧನದ ವೇಳೆ ಆತ, “ಮಗು ನನ್ನದಲ್ಲ” ಎಂದು ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಮಗು ಕೃಷ್ಣ ರಾವ್ ಅವನದ್ದೇ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಆದರೂ ಕೂಡ ಆತ ಸಂತ್ರಸ್ತೆಯನ್ನು ಮದುವೆಯಾಗುವುದಕ್ಕೂ, ಮಗುವಿನ ತಂದೆಯೆಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಕ್ಕೂ ನಿರಾಕರಿಸಿದ್ದಾನೆ.
ಈ ಪ್ರಕರಣವು ದೊಡ್ಡ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಲವು ಬಿಜೆಪಿ ನಾಯಕರು, ಸ್ಥಳೀಯ ಗ್ರಾಮಸ್ಥರು ಹಾಗೂ ಸಮಾಜದ ಗಣ್ಯರ ಸಮ್ಮುಖದಲ್ಲಿ ಸಂಧಾನ ಸಭೆಗಳನ್ನು ನಡೆಸಲಾಯಿತು. ಸಂತ್ರಸ್ತೆಯ ಭವಿಷ್ಯ ಹಾಗೂ ಮಗುವಿನ ಹಿತದೃಷ್ಟಿಯಿಂದ ವಿವಾಹಕ್ಕೆ ಒಪ್ಪಿಕೊಳ್ಳುವಂತೆ ಕೃಷ್ಣ ರಾವ್‌ಗೆ ಮನವಿ ಮಾಡಲಾಯಿತು. ಆದರೆ ಸಂಧಾನ ಸಭೆಗಳಲ್ಲೂ ಆತ ತನ್ನ ನಿಲುವನ್ನು ಬದಲಾಯಿಸಿಲ್ಲ.
ಮಗುವಿಗೆ ಈಗಾಗಲೇ ಆರು ತಿಂಗಳು ತುಂಬಿದ್ದರೂ, ತಾನು ಕಾನೂನು ಪ್ರಕಾರ ವಿವಾಹವಾಗುವುದಿಲ್ಲ, ಮಗುವನ್ನು ಒಪ್ಪುವುದಿಲ್ಲ ಎಂಬ ಹಠಕ್ಕೆ ಆರೋಪಿ ಬಿದ್ದಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಇನ್ನು ಯಾವುದೇ ದಾರಿ ಕಾಣದೆ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾಳೆ. “ನನಗೂ ನನ್ನ ಮಗುವಿಗೂ ನ್ಯಾಯ ಬೇಕು. ಕಾನೂನು ಮೂಲಕವೇ ಹೋರಾಟ ನಡೆಸುತ್ತೇನೆ” ಎಂದು ಯುವತಿ ಹೇಳಿದ್ದಾಳೆ.













