ನಮ್ಮ ಅತ್ತೆ ಮಗಳ ಸಾವಿಗೆ ನ್ಯಾಯ ಬೇಕು ಎಂದು ಪೊಲೀಸರು, ಸಂಬಂಧಿಗಳು ಹಾಗೂ ವೈದ್ಯರ ಸಮ್ಮಖದಲ್ಲಿಯೇ ಕೈಯಲ್ಲಿ ಹಗ್ಗ ಹಿಡಿದು ನೇಣು ಬಿಗಿದುಕೊಳ್ಳಲು ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ಶವಗಾರದ ಬಳಿ ಶನಿವಾರ ನಡೆದಿದೆ.
ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕಾಮಗಾನಹಳ್ಳಿ ನಿವಾಸಿ 28 ವರ್ಷದ ಪುಷ್ಪಾ ಎನ್ನುವ ಗೃಹಿಣಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಗಂಡನ ಮನೆಯವರು ಪುಷ್ಪಾ ಶವವನ್ನು ಆಸ್ಪತ್ರೆಗೆ ಸಾಗಿಸಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಶವಗಾರದ ಬಳಿ ಬಂದ ಪುಷ್ಪಾ ಅತ್ತೆಯ ಮಗ ಮುರಳಿ ಎಂಬಾತ ಪುಷ್ಪಾ ಸಾವಿಗೆ ನ್ಯಾಯ ಬೇಕು ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮ ಮಾಡಿದ್ದಾನೆ ಎನ್ನಲಾಗಿದೆ.
ಚಿಂತಾಮಣಿ ತಾಲೂಕಿನ ಮಸಲಹಳ್ಳಿ ನಿವಾಸಿ ಪುಷ್ಪಾಳನ್ನು 8 ವರ್ಷಗಳ ಹಿಂದೆ, ಮಂಚೇನಹಳ್ಳಿ ತಾಲೂಕಿನ ಕಾಮಗಾನಹಳ್ಳಿ ಗ್ರಾಮದ ಶ್ರೀನಿವಾಸ್ಗೆ ಕೊಟ್ಟು ಎರಡನೆ ಮದುವೆ ಮಾಡಲಾಗಿತ್ತು. ದಂಪತಿಗೆ 6 ವರ್ಷದ ಹೆಣ್ಣು ಮಗುವೂ ಇತ್ತು. ಆದರೆ, ಕೌಟುಂಬಿಕ ಕಲಹ ಹಿನ್ನಲೆ ಆಗಾಗ ಮನಸ್ತಾಪ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ವರದಕ್ಷಿಣೆಗಾಗಿ ಗಂಡ ಶ್ರೀನಿವಾಸ್, ಅತ್ತೆ ಮಾವ ಕಿರುಕುಳ ಕೊಡುತ್ತಿದ್ದಾರೆ ಎಂದು ಪುಷ್ಪ ಈ ಹಿಂದೆ ತವರು ಮನೆಯವರ ಜೊತೆ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ ಆದರೆ, ಶುಕ್ರವಾರ ಪುಷ್ಪಾ ಗಂಡನ ಮನೆಯಲ್ಲಿ ಶವವಾಗಿದ್ದ ಪ್ರಕರಣ ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಪುಷ್ಪಾ ಸಾವಿಗೆ ಆಕೆಯ ಗಂಡ ಅತ್ತೆ ಮಾವ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅವರನ್ನು ಬಂಧಿಸುವಂತೆ ಒತ್ತಾಯಿಸಿ ಮೃತಳ ಕಡೆಯವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನವೋಲಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.