ನ್ಯೂಸ್ ನಾಟೌಟ್: ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ವೀಕೆಂಡ್ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ಧಿಡೀರ್ ಎಂಟ್ರಿ ಕೊಟ್ಟ ಪರಿಣಾಮ ಭಯಗೊಂಡ ಯುವತಿಯೊಬ್ಬಳು ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿರುವ ಘಟನೆ ಹೆಚ್‌ಎಎಲ್ ನ ಎಇಸಿಎಸ್ ಲೇಔಟ್ ನ ಹೊಟೇಲ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಯುವತಿಯ ತಲೆ, ಮೈಕೈಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಂಭೀರ ಗಾಯಗೊಂಡಿರುವ ಯುವತಿಯನ್ನು ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಶನಿವಾರ ರಾತ್ರಿ ಯುವತಿ ಸೇರಿದಂತೆ ಎಂಟು ಜನ ಸ್ನೇಹಿತರು ಸೇರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗಾಗಿ ಮೂರು ರೂಂಗಳನ್ನು ಬುಕ್ ಮಾಡಿದ್ದರು. ಬಳಿಕ ಯುವಕರು ಹಾಗೂ ಯುವತಿಯರು ಹಾಡುಗಳನ್ನು ಹಾಕಿ ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಪಾರ್ಟಿ, ಡ್ಯಾನ್ಸ್ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲ ನಿಮಿಷಗಳ ಬಳಿಕ ಹೋಟೆಲ್ ಗೆ ಹೊಯ್ಸಳ ಪೊಲೀಸರು ಆಗಮಿಸಿದ್ದರು. ಪೊಲೀಸರು ಬಂದ ವಿಚಾರ ತಿಳಿದು ಬಾಲ್ಕನಿಗೆ ತೆರಳಿದ ಯುವತಿ ಭಯದಿಂದ ಬಾಲ್ಕನಿಯಿಂದ ಹಾರಿದ್ದಾಳೆ. ಕಬ್ಬಿಣದ ಗ್ರಿಲ್ಸ್ ಮೇಲೆ ಬಿದ್ದು ಯುವತಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಯುವತಿಯನ್ನು ಆಕೆಯ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ.
ಪಾರ್ಟಿ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೋಟೆಲ್ ಎಂಟ್ರಿ ಕೊಟ್ಟ ವೇಳೆ ಪಾರ್ಟಿ ವಿಡಿಯೋ ತೋರಿಸಿ ದೂರು ಬಂದಿದೆ ಎಂದಿದ್ದರು. ನಂತರ ಯುವಕರ ಬಳಿ ಹಣ ಕೇಳಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ. ಫೋನ್ ಪೇ ಮಾಡುತ್ತೇವೆ ಎಂದು ಯುವಕರು ಹೇಳಿದಾಗ ಫೋನ್ ಪೇ ಬೇಡ, ಕ್ಯಾಶ್ ಕೊಡಿ ಎಂದು ಪೊಲೀಸರು ಕೇಳಿದ್ದಾರೆ. ಸರಿ ಎಂದು ಎಟಿಎಂನಲ್ಲಿ ಹಣ ತರುತ್ತೇನೆ ಎಂದು ಯುವಕ ಹೋಟೆಲ್‌ನಿಂದ ಹೊರಗೆ ಬಂದ ವೇಳೆ ಯುವತಿ ಹೋಟೆಲ್ ಬಾಲ್ಕನಿಯಿಂದ ಹಾರಿದ್ದಾಳೆ. ಸದ್ಯ ಘಟನೆ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ, ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.













