ಕಡಬ: ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಯೋಧರೊಬ್ಬರಿಗೆ ಮನೆಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಆಗದೆ ಬಹು ವರ್ಷದಿಂದ ಒದ್ದಾಡುತ್ತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಿಂದ ವರದಿಯಾಗಿದೆ. ದೇಶ ಕಾಯುವ ಯೋಧ ಗಡಿಯಲ್ಲಿ ಜೀವ ಒತ್ತೆಯಿಟ್ಟು ಕಷ್ಟಪಟ್ಟು ದುಡಿದು ತನ್ನ ಪುಟ್ಟ ಸಂಸಾರಕ್ಕಾಗಿ ಕನಸಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಲಕ್ಷಾಂತರ ರೂ ವೆಚ್ಚ ಮಾಡಿ ಕಟ್ಟಿಸಿದ ಕನಸಿನ ಮನೆಯಲ್ಲಿ ವಾಸಿಸುವ ಭಾಗ್ಯ ಅವರಿಗೆ ಇದುವರೆಗೂ ಬಂದಿಲ್ಲದಿರುವುದು ವಿಪರ್ಯಾಸವೇ ಸರಿ.
ಕಡಬ ತಾಲೂಕಿನ ಮರ್ದಳದ ಕಂಪಮನೆಯ ಯೋಧ ಪುರುಷೋತ್ತಮ್ ಕಳೆದ 20 ವರ್ಷದಿಂದ ಭಾರತೀಯ ಸೈನ್ಯದ ಮದ್ರಾಸ್ ಎಂಜಿನೀಯರಿಂಗ್ ಗ್ರೂಪ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಅರುಣಾಚಲ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಯೋಧ ಮುಂದಿನ ದಾರಿ ಕಾಣದೆ ಕಂಗಾಲಾಗಿರುವುದಂತೂ ನಿಜ.
ಏನಿದು ಘಟನೆ?
ಏಳು ವರ್ಷದ ಹಿಂದೆ ಇವರದ್ದೇ ತೋಟದಲ್ಲಿ ಮನೆ ಕಟ್ಟಿಸಿದ್ದರು. ಇವರ ಮನೆಯ ಸಂಪರ್ಕಕ್ಕೆ ರಸ್ತೆ ಹಾಗೂ ಕರೆಂಟ್ ಗೆ ಪಕ್ಕದಲ್ಲಿರುವ ಎರಡು ಜಮೀನನ್ನು ದಾಟಿ ಬರಬೇಕಾಗುತ್ತದೆ. ಇದಕ್ಕೆ ನೆರೆಹೊರೆಯ ಎರಡೂ ಮನೆಯವರು ಆಕ್ಷೇಪವೆತ್ತಿದ್ದಾರೆ. ಆ ಎರಡೂ ಮನೆಯವರು ಜೀವ ಹೋದರೂ ರಸ್ತೆ ಹಾಗೂ ಕರೆಂಟ್ ನೀಡೆವು ಎಂದು ಕುಳಿತಿದ್ದಾರೆ. ಈ ಕಾರಣಕ್ಕೆ ಯೋಧ ಪುರುಷೋತ್ತಮ್ ಅವರಿಗೆ ಇದುವರೆಗೆ ಕರೆಂಟ್ ಆಗಿಲ್ಲ. ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿಲ್ಲ. ವಿಶೇಷವೆಂದರೆ ಇವರಿಗೆ ಕರೆಂಟ್ ನೀಡುವುದಕ್ಕೆ ವಿರೋಧಿಸುತ್ತಿರುವ ಎರಡು ಮನೆಯವರು ಕೂಡ ಸಮೀಪದ ದೇವಸ್ಥಾನದಿಂದ ಕರೆಂಟ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅದೇ ದೇವಸ್ಥಾನದಿಂದ ಇವರ ಮನೆಗೆ ಲೈನ್ ಎಳೆಯುವುದಕ್ಕೆ ಆ ಮನೆಯವರು ಬಿಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಕಳೆದ ಏಳು ವರ್ಷದಿಂದ ಯೋಧನ ಮನೆ ಕತ್ತಲಾಗಿಯೇ ಉಳಿದಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ತಂಡದ EXCLUSIVE ಸಂದರ್ಶನದಲ್ಲಿ ಮಾತನಾಡಿದ ಯೋಧ ಪುರುಷೋತ್ತಮ್, ‘ಜೀವನದಲ್ಲಿ ಕಷ್ಟ ಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಒಂದು ಮನೆ ಕಟ್ಟಿಕೊಂಡಿದ್ದೆ. ಆದರೆ ಆ ಮನೆಯನ್ನು ಗೃಹ ಪ್ರವೇಶ ಮಾಡುವ ಭಾಗ್ಯವೂ ನನಗೆ ಸಿಕ್ಕಿಲ್ಲ. ಸ್ಥಳೀಯರಿಬ್ಬರ ಹೊಟ್ಟೆ ಉರಿಗೆ ಕಳೆದ ಏಳು ವರ್ಷದಿಂದ ನನ್ನ ಮನೆಗೆ ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಸೌಲಭ್ಯವಿಲ್ಲದೆ ಕತ್ತಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಜೀವನದಲ್ಲಿ ಕಷ್ಟ ಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಒಂದು ಮನೆ ಕಟ್ಟಿಕೊಂಡಿದ್ದೆ. ಆದರೆ ಆ ಮನೆಯನ್ನು ಗೃಹ ಪ್ರವೇಶ ಮಾಡುವ ಭಾಗ್ಯವೂ ನನಗೆ ಸಿಕ್ಕಿಲ್ಲ. ಸ್ಥಳೀಯರಿಬ್ಬರ ಹೊಟ್ಟೆ ಉರಿಗೆ ಕಳೆದ ಏಳು ವರ್ಷದಿಂದ ನನ್ನ ಮನೆಗೆ ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಸೌಲಭ್ಯವಿಲ್ಲದೆ ಕತ್ತಲಾಗಿದೆ
ಪುರುಷೋತ್ತಮ್ , ಯೋಧ