ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಗಣಪತಿ ಕಟ್ಟೆಗೆ ದುಷ್ಕರ್ಮಿಗಳು ಅಪಚಾರ ಎಸಗಿದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಿಹಾರದ ಬಾಗಲ್ ಪುರ ಜಿಲ್ಲೆಯ ರವೀಂದ್ರ (25 ) ಎಂದು ಗುರುತಿಸಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.
ಘಟನೆ ಸಾರಾಂಶ:
ಕಳೆದ ಶುಕ್ರವಾರ ಇಲ್ಲಿ ಗಣೇಶೋತ್ಸವ ಆಚರಿಸಿ ತೆರಳಿದ ಬಳಿಕ ರಾತ್ರಿ ವೇಳೆ ಕಿಡಿಗೇಡಿಗಳು ಗಣೇಶ ಕಟ್ಟೆಯನ್ನು ಕಲ್ಲು ಎತ್ತಿ ಹಾಕಿ ಪುಡಿಗೈದಿದ್ದರು. ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಘಟನೆ ಹಿಂದೆ ಯಾರಿದ್ದಾರೆ ಅನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದರು. ಅನ್ಯಮತೀಯರು ಮೀನು ಹಿಡಿಯುವುದಕ್ಕೆ ಗಣಪತಿ ಕಟ್ಟೆಯ ಸಮೀಪವಿರುವ ನದಿಗೆ ಆಗಾಗ್ಗೆ ಬರುತ್ತಿದ್ದರು. ಅದನ್ನು ಸ್ಥಳೀಯರು ಹಲವು ಸಲ ವಿರೋಧಿಸಿದ್ದರು. ಈ ಕಾರಣದಿಂದ ಕೃತ್ಯ ನಡೆದಿರಬಹುದೇ ಅನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ ಇದೀಗ ಎಲ್ಲ ಊಹಾಪೋಹಗಳಿಗೆ ಪೊಲೀಸರು ತೆರೆ ಎಳೆದಿದ್ದಾರೆ.