ನ್ಯೂಸ್ ನಾಟೌಟ್ : ʻನಾನು ಲೇಖಕಿ ಅಥವಾ ಸಂಸದಾಳಾಗಿ, ಸಮಾಜ ಸೇವಕಿಯಾಗಿ ನಿಂತು ಇಲ್ಲಿ ಕೇಳಿಕೊಳ್ಳುತ್ತಿಲ್ಲ. ಒಬ್ಬ ಭಾರತ ಮಾತೆಯ ಮಗಳಾಗಿ, ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿʼ ಎಂದು ರಾಜ್ಯಸಭೆಯಲ್ಲಿ ರಾಜ್ಯಸಭೆಯ ನಾಮನಿರ್ದೇಶಿತ ಸಂಸದೆ ಸುಧಾ ಮೂರ್ತಿ ಅವರು ಕೇಳಿಕೊಂಡರು.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸೋಮವಾರ(ಡಿ.8)ರಂದು ‘ವಂದೇ ಮಾತರಂ’ ಹಾಡಿನ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಚರ್ಚೆ ನಡೆಯಿತು. ಅಂದು ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ಮಧ್ಯೆ ವಾಗ್ದಾಳಿ ನಡೆದಿತ್ತು. 2026ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ವಂದೇ ಮಾತರಂ ವಿಚಾರ ಮುನ್ನೆಲೆಗೆ ಬಿಜೆಪಿ ತಂದಿದೆ ಎಂದು ಪ್ರಿಯಾಂಕಾ ಗಾಂಧಿ
ವಾದ್ರಾ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಂದೇ ಮಾತರಂ ತುಂಡರಿಸಿದ್ದ ಕಾರಣದಿಂದಲೇ ದೇಶ ವಿಭಜನೆಯಾಗಿದ್ದು ಎಂದು ಗೃಹ ಸಚಿವ ಅಮಿತ್ ಶಾ ಅವರು ಕಿಡಿಕಾರಿದ್ದರು. ಇಂದು(ಡಿ.10) ಬುಧವಾರವೂ ಸಹ ವಂದೇ ಮಾತರಂ ಗೀತೆ ಬಗ್ಗೆ ಚರ್ಚೆ ಮುಂದುವರೆದಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸುಧಾ ಮೂರ್ತಿ ಒತ್ತಾಯಸಿದರು. ತಮ್ಮ ಭಾಷಣದ ಆರಂಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಅವರು, ʻನಾನು ಇಲ್ಲಿ ಒಬ್ಬ ಸಂಸದೆಯಾಗಿಯೋ ಅಥವಾ ಸಮಾಜ ಸೇವಕಿಯಾಗಿಯೋ ಅಥವಾ ಲೇಖಕಿಯಾಗಿ ನಿಂತು ಮಾತನಾಡುತ್ತಿಲ್ಲ. ಭಾರತದಲ್ಲಿ ಹುಟ್ಟಿದ ತಾಯಿಯಾಗಿ(ಮದರ್ ಇಂಡಿಯಾ) ಅಥವಾ ಭಾರತಾಂಬೆಯ ಮಗಳಾಗಿ ಇಲ್ಲಿ ನಿಂತಿದ್ದೇನೆʼ ಎಂದರು.













