ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ನ.19ರಂದು ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಸಂತ್ರಸ್ತರಾದ ಆಟೋ ಚಾಲಕ ಪುರುಷೋತ್ತಮ ಪೂಜಾರಿಯವರ ಮನೆ ನವೀಕರಣ ಕನಸು ಈಡೇರಿದೆ.
ಕಷ್ಟದ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡ ಭೇಟಿಯಾದಾಗ ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎನ್ನುವ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ ಎಂಬ ನೋವಿನಿಂದ ಆತ್ಮವಿಶ್ವಾಸ ಕಳೆದುಕೊಂಡು ಮತ್ತಷ್ಟು ನೊಂದುಕೊಂಡು ದುಃಖ ವ್ಯಕ್ತಪಡಿಸಿದ್ದರು.
ಈ ವೇಳೆ ಮನೆ ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಪದ್ಮರಾಜ್ ಅವರು ಮನೋಸ್ಥೈರ್ಯ ತುಂಬಿದ್ದರು. ಮಾತು ಕೊಟ್ಟ ಮರುದಿನದಿಂದಲೇ ಮನೆಯನ್ನು ಸುಸಜ್ಜಿತವಾಗಿ ನವೀಕರಿಸಲು ಪ್ರಾರಂಭಿಸಿದ ಸಂಸ್ಥೆ ಇದೀಗ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ಮನೆ ನಿರ್ಮಿಸಿಕೊಟ್ಟಿದೆ.. ಮಾರ್ಚ್ 22ರ ಯುಗಾದಿ ಹಬ್ಬದಂದು ಬೆಳಗ್ಗೆ 10ಗಂಟೆಗೆ ಮನೆ ಹಸ್ತಾಂತರ ನಡೆಯಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಮನೆ ನವೀಕರಣದ ಭರವಸೆ ನೀಡಿದ್ದರು. ಅದರಂತೆ ಗುರುಬೆಳದಿಂಗಳು ಸಂಸ್ಥೆ ತನ್ನ ಸೇವಾ ಕಾರ್ಯವನ್ನು ಪೂರ್ಣಗೊಳಿಸಿದೆ. ಇದೀಗ ಪುರುಷೋತ್ತಮ ಪೂಜಾರಿಯವರ ಪಾಲಿಗೆ ಮನೆ ನವೀಕರಣ ಈಡೇರಿದ ಖುಷಿ. ಇದರಿಂದರ ಅವರ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿದೆ.