ನ್ಯೂಸ್ ನಾಟೌಟ್ : ಕಾಮಿಡಿ ಶೋಗಳ ಮೂಲಕ ಜನರ ಮನಸ್ಸು ಗೆದ್ದ ಗಿಲ್ಲಿ ನಟ (Gilli Nata), ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಅವರು ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ (Super Hit) ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ.
ವಿಜಯಾನಂದ್ ನಿರ್ದೇಶನದ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಒಟ್ಟಾರೆ ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಹೀಗೆ ಬಿಡುಗಡೆಗೊಂಡಿರುವ `ಸೂಪರ್ ಹಿಟ್’ ಟೀಸರ್ ಸು ಫ್ರಂ ಸೋ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.
ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಅದಕ್ಕಿದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಲ್ಲು ಹುಟ್ಟಿದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯನ್ನು ನಿರ್ದೇಶಕ ವಿಜಯಾನಂದ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ಸು ಫ್ರಂ ಸೋ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಹೊಸ ಹುರುಪು ತುಂಬಿಕೊಂಡಿರುವ ವಿಜಯಾನಂದ್, ಈ ಚಿತ್ರಕ್ಕೂ ಅಂಥಾದ್ದೇ ಬೆಂಬಲ ಸಿಗುವ ಆಶಯ ಮತ್ತು ಭರವಸೆ ಹೊಂದಿದ್ದಾರೆ.ಈಗಿನ ಯುವ ಸಮುದಾಯಕ್ಕೆ ಹತ್ತಿರಾಗಿರೋ ಕಥೆ ಹೊಂದಿರುವ `ಸೂಪರ್ ಹಿಟ್’ ಚಿತ್ರದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ.













