ನ್ಯೂಸ್ ನಾಟೌಟ್: ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಶುಕ್ರವಾರ ನಡೆದ ಸಾಮೂಹಿಕ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಹತ್ಯೆಯಾದ ಶಂಭು ಭಟ್ಟ ಅವರ ಹಿರಿಯ ಸೊಸೆ ವಿದ್ಯಾ ಶ್ರೀಧರ ಭಟ್ಟ ಮತ್ತು ಆಕೆಯ ತಂದೆ ಶ್ರೀಧರ ಜನಾರ್ದನ ಭಟ್ಟ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವಿನಯ ಶ್ರೀಧರ ಭಟ್ಟ ಪ್ರಕರಣದ ಆರೋಪಿ ಎಂದು ಸಂಶಯಿಸಲಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಹಿರಿಯ ಸೊಸೆ ವಿದ್ಯಾ ಹಾಗೂ ಆಕೆಯ ತಂದೆ ಶ್ರೀಧರ ಅವರ ಕುಮ್ಮಕ್ಕಿನಿಂದ ವಿನಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಶಂಭು ಭಟ್ಟ ಅನಾರೋಗ್ಯದಿಂದ ಕಳೆದ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಮರಣದ ನಂತರ ಆಸ್ತಿಯ ವಿಚಾರದಲ್ಲಿ ಜಗಳ ಆರಂಭವಾಗಿತ್ತು. ಸೊಸೆ ಮೂಲ ಮನೆಯಲ್ಲೇಇದ್ದು, ಆಕೆಯ ಸಹೋದರ ವಿನಯ ಕೂಡ ಹಾಡುವಳ್ಳಿಗೆ ಹೋಗಿ ಪಾಲು ಕೊಡುವಂತೆ ಜಗಳ ಮಾಡಿದ್ದ ಎನ್ನಲಾಗಿದೆ. ಇದರಿಂದ ಶಂಭು ಭಟ್ಟರು ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ತನಗೆ, ಪತ್ನಿಗೆ ಎಂದು ಆಸ್ತಿಯನ್ನು ಹಂಚಿದ್ದರು. ಆದರೆ ಶುಕ್ರವಾರ ಕೊಟ್ಟಿಗೆ ನಿರ್ಮಿಸುವ ವಿಚಾರದಲ್ಲಿ ಮತ್ತೇ ಜಗಳ ಆರಂಭವಾಗಿತ್ತು. ಘಟನೆ ತಾರಕಕ್ಕೇರಿ ಮಧ್ಯಾಹ್ನ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಇನ್ನು ಘಟನೆ ನಡೆದಾಗ ಮನೆಯಲ್ಲೇ ಇದ್ದ ರಾಘು ಭಟ್ಟ ಅವರ ಪುಟ್ಟ ಮಗು ಹೊರಗೆ ಬಂದು ಅಳುತ್ತಿರುವಾಗ ಮಗುವನ್ನು ಸಂತೈಸುವವರೇ ಇಲ್ಲದಿರುವ ದೃಶ್ಯ ಮನ ಕಲಕುತ್ತಿತ್ತು. ತಂದೆ ತಾಯಿ ಮತ್ತು ಅಜ್ಜ ಅಜ್ಜಿಯನ್ನು ಕಳೆದುಕೊಂಡ ರಾಘು ಭಟ್ಟ ಅವರ ನಾಲ್ಕೂವರೇ ವರ್ಷದ ಮಗಳು ಮತ್ತು ಒಂದೂವರೇ ವರ್ಷದ ಮಗು ಮಾತ್ರ ಅನಾಥರಾಗಬೇಕಾಯಿತು.