ನ್ಯೂಸ್ ನಾಟೌಟ್ : ಚುಮು ಚುಮು ಚಳಿ ಮಧ್ಯೆಯೂ ನಾಳೆ (ನ.29) ಮತ್ತು ನಾಡಿದ್ದು (ನ.30) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯ ಕರ್ನಾಟಕ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ನಾಳೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಅಥವಾ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿಯೂ ಮೋಡಕವಿದ ವಾತಾವರಣದ ಇರುವ ಸಾಧ್ಯತೆ ಇದೆ.
ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಯ ಕೆಲವೆಡೆ ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡುಬರಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವೆಡೆ ಸಣ್ಣ ಚಳಿಯ ಅನುಭವ ಜನರಿಗೆ ಆಗಲಿದೆ.













