ನ್ಯೂಸ್ ನಾಟೌಟ್: ಮದುವೆ ಹೆಣ್ಣಿನ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಖ್ಯಾತ ವೈದ್ಯೆ ಡಾ. ಗುಂಜನ್ ದೇಶಪಾಂಡೆ ಎಂಬವರು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ನಟಿ ಉಪಾಸನಾ ಕೊನಿಡೆಲಾ ಅವರು ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು. ‘ಇಂದು ನಾನು ನನ್ನ ಕಾಲ ಮೇಲೆ ನಿಂತಿದ್ದೇನೆ, ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದೇನೆ. ಅದೇ ರೀತಿ ನೀವು ನಿಮಗಾಗಿ ಕೆಲಸ ಮಾಡಿ, 30 ವರ್ಷ ತುಂಬುವ ಮೊದಲೇ ನಿಮ್ಮ ಗುರಿಗಳನ್ನು ನಿಗದಿಪಡಿಸಿ, ಕೆರಿಯರ್ ಸೆಟ್ ಮಾಡಿಕೊಳ್ಳಿ. ಜೊತೆಗೆ ಹೆಣ್ಮಕ್ಳು ಅಂಡಾಣು ಫ್ರೀಜ್ ಮಾಡಿಟ್ಟುಕೊಳ್ಳಿ. ಇದು ಮಹಿಳೆಯರಿಗೆ ದೊಡ್ಡ ವಿಮೆ ಇದ್ದಂತೆ’ ಎಂದು ಉಪಾಸನಾ ಹೇಳಿಕೆಯನ್ನು ನೀಡಿದ್ದರು. ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಹಲವರು ಉಪಾಸನ ಅವರ ಸಲಹೆ ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಕೆಲವು ಶ್ರೀಮಂತ ಕುಟುಂಬಗಳಿಗೆ ಮಾತ್ರ ವರ್ಕ್ ಆಗುತ್ತೆ, ಇವರ ಈ ಮಾತು ಕೇಳಿ ಯಾರು ಮದುವೆಯನ್ನು ಮುಂದೂಡಬೇಡಿ ಹೇಳಿದ್ರು. ಇದೀಗ ಖ್ಯಾತ ವೈದ್ಯೆ ಉಪಾಸನಾ ಮಾತನ್ನು ಟೀಕಿಸಿದ್ದಾರೆ. ಮದುವೆ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಗುಂಜನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, “ನನಗೆ 23 ವರ್ಷಕ್ಕೆ ಮದುವೆಯಾಯ್ತು, 27 ವರ್ಷಕ್ಕೆ ಮನೆ ಮಾಡಿದೆ, 28 ವರ್ಷಕ್ಕೆ ಮೊದಲ ಮಗು, 29 ವರ್ಷಕ್ಕೆ ಅಖಿಲ ಭಾರತ ನೇತ್ರ ವಿಜ್ಞಾನ ಸಂಘದ ಸಹಭಾಗಿತ್ವ ಪಡೆದೆ, 30 ವರ್ಷಕ್ಕೆ ಎರಡನೇ ಮಗು, 33 ವರ್ಷಕ್ಕೆ ಅಂತರಾಷ್ಟ್ರೀಯ ನೇತ್ರವಿಜ್ಞಾನ ಮಂಡಳಿಯ ಪಾಲುದಾರಿಕೆ, 36 ವರ್ಷಕ್ಕೆ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸಹಭಾಗಿತ್ವ ಪಡೆದೆ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ನನಗೆ ವೈವಾಹಿಕ ಜೀವನ ವೃತ್ತಿ ಜೀವನಕ್ಕೆ ಅಡ್ಡಿಯಾಗಿಲ್ಲ ಎಂದು ವಿವರಿಸುತ್ತಾ ಮದುವೆ ಎಂದಿಗೂ ನಿಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.













