ನ್ಯೂಯಾರ್ಕ್ : ಕೋವಿಡ್ ಲಸಿಕೆ ಪಡೆದವರಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುವುದಿಲ್ಲ ಅನ್ನುವುದು ನಂಬಿಕೆ. ಆದರೆ ಲಸಿಕೆ ಪಡೆದವರಲ್ಲೂ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಅನ್ನುವ ಸ್ಫೋಟಕ ಮಾಹಿತಿಯನ್ನು ಅಮೆರಿಕದ ತಜ್ಞರು ಬಿಚ್ಚಿಟ್ಟಿದ್ದಾರೆ. ಸದ್ಯ ಲಸಿಕೆ ಸ್ವೀಕರಿಸಿದ ಬಳಿಕ ಸೋಂಕು ಹರಡಿದೆ ಅನ್ನುವುದಕ್ಕೆ ದಾಖಲೆ ಇರುವ ಮಾಹಿತಿಯನ್ನು ತಜ್ಞರು ಹೊರಹಾಕಿದ್ದು ಜನರ ಆತಂಕ ಹೆಚ್ಚಿಸಿದೆ.
ಏನಿದು ಮಾಹಿತಿ?
ಅಮೆರಿಕದ ಮೆಸಾಚ್ಯುಸೆಟ್ಸ್ ನ ಪ್ರಾವಿನ್ಸ್ ಟೌನ್ ನಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಸಾವಿರಾರು ಜನರ ಲಸಿಕೆ ಪಡೆದವರು ಮತ್ತು ಪಡೆಯದೇ ಇದ್ದವರು ಒಂದಾಗಿ ಪಾರ್ಟಿ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ 469 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಶೇ.75ರಷ್ಟು ಜನರು ಲಸಿಕೆ ಪಡೆದಿದ್ದವರೇ ಆಗಿದ್ದರು. ಇದು ಎಚ್ಚರಿಕೆಯ ಕರೆಗಂಟೆ ಎಂದು ತಜ್ಞರು ಹೇಳಿದ್ದಾರೆ. ಸೋಂಕು ಹೆಚ್ಚಾಗುವುಕ್ಕೆ ಡೆಲ್ಟಾವೈರಸ್ ಕಾರಣವೋ ಅಥವಾ ಲಸಿಕೆ ಪಡೆದಾಯ್ತು ಇನ್ನೇನೂ ತೊಂದರೆ ಇಲ್ಲ ಎಂದು ಜನರು ಎಲ್ಲಾ ಕೋವಿಡ್ ಮಾರ್ಗಸೂಚಿ ಮರೆತಿದ್ದು ಕಾರಣವೋ ಎಂಬುದೂ ಇನ್ನೂ ಗೊತ್ತಿಲ್ಲ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ. ಲಸಿಕೆ ಪಡೆದವರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಸರ್ಕಾರ, ವಿಜ್ಞಾನಿಗಳೇ ಇನ್ನೂ ಸ್ಪಷ್ಟವಾಗಿ ಏನೂ ಹೇಳದ ಸ್ಥಿತಿಯಲ್ಲಿರುವ ಕಾರಣ, ಲಸಿಕೆ ಪಡೆದವರು ತಾವು ಹೇಗಿರಬೇಕೆಂಬ ಬಗ್ಗೆಯೇ ಗೊಂದಲದಲ್ಲಿರುವಂತಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.