ಮಂಗಳೂರು: ತಾಲಿಬಾನಿಗರ ಅಟ್ಟಹಾಸದಿಂದ ಆಫ್ಘಾನಿಸ್ತಾನದಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಆಫ್ಘಾನಿಸ್ತಾನದ ಚಿತ್ರಣಕ್ಕೆ ಇಡೀ ವಿಶ್ವವೇ ಮರುಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿಯೂ ವಿಶ್ವವಿದ್ಯಾನಿಲಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ಮತ್ತವರ ಕುಟುಂಬ ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುರಕ್ಷೆಯ ಭರವಸೆ ನೀಡಿದ್ದಾರೆ.
ಮಂಗಳೂರು ವಿ.ವಿ., ನಿಟ್ಟೆ ಶಿಕ್ಷಣ ಸಂಸ್ಥೆ ಹಾಗೂ ಸಂತ ಅಲೋಶಿಯಸ್ ಕಾಲೇಜು ಸೇರಿದಂತೆ ಮೂರು ವಿದ್ಯಾ ಸಂಸ್ಥೆಗ ಳಲ್ಲಿ ಒಟ್ಟು 58 ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ, ಪಿಎಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಜತೆಗೆ ಕೆಲವರ ಕುಟುಂಬ ಸದಸ್ಯರೂ ಇದ್ದಾರೆ. ಆಫ್ಘಾನಿಸ್ತಾನದ ರಾಜಕೀಯ ಬೆಳವಣಿಗೆಗಳನ್ನು ಕಂಡು ತಮ್ಮ ಕುಟುಂಬದವರ ಬಗ್ಗೆ ಆತಂತಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಅವರ ಮನೆಯವರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಆತಂಕವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೇ ಇಲ್ಲಿ ಶಿಕ್ಷಣ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟಂಬರ್ನಲ್ಲಿ ಕೊನೆಗೊಳ್ಳುತ್ತಿದ್ದು, ಅದನ್ನು ವಿಸ್ತರಿಸುವ ಕುರಿತಂತೆಯೂ ಮನವಿ ಸಲ್ಲಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇವರಿಗೆ ಸುರಕ್ಷೆಯ ಭರವಸೆ ನೀಡಿದ್ದಾರೆ.