ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಕ ಹಳದಿ, ಎಲೆಚುಕ್ಕಿ ರೋಗದ ಸುಳಿಗೆ ಸಿಲುಕಿ ನೆಲಕಚ್ಚಿದ್ದಾಗಿದೆ. ಇದೀಗ ಪುತ್ತೂರು, ಕಡಬಕ್ಕೂ ಎಲೆಚುಕ್ಕಿ ರೋಗ ಹರಡುತ್ತಿದೆ ಅನ್ನುವ ರೈತರ ಆತಂಕದ ನಡುವೆಯೇ ಅಡಿಕೆ ಮರದ ಹಿಂಗಾರ ಬಿಡುವ ಜಾಗದಲ್ಲಿ ರಂಧ್ರ ಕೊರೆಯುವ ಕೀಟದ ಬಾಧೆ ಗೋಚರವಾಗಿದೆ. ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸುಳ್ಯದ ಖ್ಯಾತ ವಕೀಲರಾದ ಎಂ. ವೆಂಕಪ್ಪ ಗೌಡ ಅವರು, ‘ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಯು ಹಳದಿ ರೋಗ ಸೇರಿದಂತೆ ಇನ್ನಿತರ ಮಾರಕ ರೋಗಗಳಿಗೆ ತುತ್ತಾಗಿ ಬಹುತೇಕ ಶೇ.70ರಷ್ಟು ಕೃಷಿಕರು ತಮ್ಮ ಅಡಿಕೆ ತೋಟವನ್ನು ಕಳೆದುಕೊಂಡಿದ್ದಾರೆ. ಹೀಗಿದ್ದರೂ ನಮ್ಮ ಯಾವ ಸರ್ಕಾರಗಳು ಅಥವಾ ಜನ ಪ್ರತಿನಿಧಿಗಳು ಅದರ ಪರಿಹಾರಕ್ಕೆ ಇದುವರೆಗೆ ಯೋಚನೆಯನ್ನೇ ಮಾಡಿಲ್ಲ. ಈ ನಡುವೆ ಇದೀಗ ಕಡಬ, ಪುತ್ತೂರು ತಾಲೂಕಿನಲ್ಲಿ ಅಡಿಕೆ ಕೃಷಿಗೆ ತೆಂಗಿನ ಮರವನ್ನು ರಂಧ್ರ ಮಾಡಿ ಕೊರೆಯುವ ತರಹದ ಕೀಟ ಇದೀಗ ಅಡಿಕೆ ಮರವನ್ನೂ ಕೂಡ ಕೊರೆದು ರಂಧ್ರ ಮಾಡುತ್ತಿದೆ. ಇದರಿಂದ ಅಡಿಕೆ ಮರ ಹಾಗೂ ಗಿಡಗಳು ಸಾಯುತ್ತಿವೆ. ಇದು ಅಡಿಕೆ ಕೃಷಿಕನಿಗೆ ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು, ರೈತರ ಹಿತ ಕಾಯಬೇಕು ಎಂದು ಎಂ.ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ.













