ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿರುವ ಐತಿಹಾಸಿಕ ಕ್ಷೇತ್ರ ಬಸವನಮೂಲದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅತಿರುದ್ರ ಪುರಶ್ಚರಣೆ ಹಾಗೂ ಶ್ರೀ ರುದ್ರ ಮಹಾಯಾಗ ಅಂತಿಮ ಘಟ್ಟಕ್ಕೆ ಬಂದು ತಲುಪುತ್ತಿದೆ.
ಕೊನೆಯ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನ.16 ರಂದು ಬೆಳಗ್ಗೆ 7 ಗಂಟೆಗೆ 12 ತೆಂಗಿನ ಕಾಯಿ ಗಣಪತಿ ಹೋಮ ನಡೆಯಲಿದೆ. ಬಳಿಕ ಪೂರ್ಣಾ ಸಂಖ್ಯಾ ಗೃಹ ಶಾಂತಿ ಹಾಗೂ ಸಹಸ್ರ ಮೋದಕ ಯಾಗವು ನೆರವೇರಲಿದೆ. ಬೆಳಗ್ಗೆ 11.30ಕ್ಕೆ ಸರಿಯಾಗಿ ಪೂರ್ಣಾಹುತಿ ನಡೆಯಲಿದೆ. ಬಳಿಕ ಅದೇ ದಿನ ಸಂಜೆ 6ರಿಂದ ಭಗವತಿ ಸೇವೆ ಏರ್ಪಡಿಸಲಾಗಿದೆ. ಇಷ್ಟು ದಿನಗಳ ಯಾಗದ ಸಂಪೂರ್ಣ ಫಲ ಸಿಗುವ ಕೊನೆಯ ಎರಡು ದಿನಗಳು ಭಕ್ತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಕಷ್ಟಗಳ ನಿವಾರಣೆಗಾಗಿ ಲೋಕ ಕಲ್ಯಾಣಕ್ಕಾಗಿ ಆಯೋಜಿಸಿರುವ ಈ ಯಾಗದ ವಿಶೇಷ ಶಕ್ತಿಯು ನಿಮ್ಮದಾಗಲು ಈ ಯಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕಿದೆ. 800 ವರ್ಷಗಳ ಇತಿಹಾಸ ಹೊಂದಿರುವ ಈ ಬಸವೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಪರಂಪರೆಯಿದ್ದು ಸಾಕ್ಷಾತ್ ಮಹಾದೇವನೆ ಇಲ್ಲಿ ನೆಲೆಸಿದ್ದಾನೆಂದು ನಂಬಿಕೊಂಡು ಬರಲಾಗಿದೆ.













