ಅಕ್ಷರ ಸಂತ ಹರೆಕಳ ಹಾಜಬ್ಬ ಅವರ ಪ್ರಶಸ್ತಿ , ಫಲಕಗಳನ್ನು ಇಡುವುದಕ್ಕೆ ‘ಪ್ರಶಸ್ತಿ ಮನೆ’ ನಿರ್ಮಾಣಗೊಳ್ಳುತ್ತಿದೆ.ಹೌದು,ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಸಾಧನೆಯ ಕಥೆ ಹೇಳುವ ಪ್ರಶಸ್ತಿ ಫಲಕಗಳು ಇನ್ಮುಂದೆ ಪ್ರತ್ಯೇಕ ಮನೆಯಲ್ಲಿ ಕಾಣಸಿಗಲಿದೆ. ಆ ಮನೆ ಹೆಸರೇ “ಪ್ರಶಸ್ತಿ ಮನೆ” . ದಾನಿಯೊಬ್ಬರ ನೆರವಿನಿಂದ ಈ ಮನೆ ನಿರ್ಮಾಣಗೊಂಡಿದ್ದು ಸದ್ಯದಲ್ಲೇ ಇದು ಉದ್ಘಾಟನೆಗೊಳ್ಳಲಿದೆ.
ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಂಗಳೂರಿನ ಪೇಟೆಯಲ್ಲಿ ಕಿತ್ತಲೆ ಹಣ್ಣನ್ನು ಮಾರಿ ಧನ ಸಂಗ್ರಹಿಸಿ ತಮ್ಮ ಊರಲ್ಲೇ ಶಾಲೆ ನಿರ್ಮಾಣ ಮಾಡಿದರು.ಸತತ ಪರಿಶ್ರಮ, ನಿರಂತರ ಹೋರಾಟ, ಸಾಧಿಸ ಬೇಕೆನ್ನುವ ಛಲವೇ ಇವರನ್ನು ಈ ಮಟ್ಟಕ್ಕೆ ಬಂದು ನಿಲ್ಲಲು ಕಾರಣವೂ ಆಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತನ್ನ ಸ್ವಂತಕ್ಕಾಗಿ ಏನನ್ನೂ ಬಯಸದೇ ತನ್ನ ಜೀವನವನ್ನೇ ಶಾಲೆಗಾಗಿಯೇ ಮುಡುಪಾಗಿಟ್ಟವರು.ಇವರ ಈ ಸಾಧನೆಗೆ ಪ್ರಶಸ್ತಿ-ಫಲಕಗಳು ಇವರನ್ನರಸಿ ಬಂದಿವೆ.ಆದರೆ .ಇತ್ತೀಚೆಗೆ ಪ್ರಶಸ್ತಿ ಫಲಕಗಳನ್ನು ಇಡಲು ಜಾಗದ ಕೊರತೆ ಎದುರಾದಾಗ ದಾನಿಗಳಾದ ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಮನೆಯ ಪಕ್ಕದಲ್ಲಿ ಪ್ರಶಸ್ತಿ ಫಲಕಗಳನ್ನು ಇಡಲೆಂದೇ ‘ಪ್ರಶಸ್ತಿ ಮನೆ’ಯನ್ನು ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಅದರ ಕೆಲಸ ಕಾರ್ಯಗಳು ಪೂರ್ಣಗೊಂಡು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಐನೂರು ಅಡಿಯ ಈ ಪ್ರಶಸ್ತಿ ಮನೆಯಲ್ಲಿ ಇದೀಗ ಹಾಜಬ್ಬರ 300ಕ್ಕೂ ಹೆಚ್ಚು ಪ್ರಶಸ್ತಿ ಫಲಕಗಳನ್ನು ಜೋಡಿಸಿಲಾಗಿದೆ. ಹಾಜಬ್ಬರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದ ನಂತರವಂತೂ ದೂರದೂರಿನಿಂದ ಹಾಜಬ್ಬರನ್ನು ನೋಡಲು ಜನ ಬರುತ್ತಿದ್ದರು. ಇದೀಗ ಈ ಪ್ರಶಸ್ತಿ ಮನೆಯು ಕೂಡ ಆಕರ್ಷಣೆಯ ಕೇಂದ್ರವಾಗಲಿದೆ.
‘ಅಕ್ಷರ ಸಂತ’ ಹಾಜಬ್ಬ ಅವರ ಶಾಲೆಗಾಗಿ ಅವಿನಿರತ ಹೋರಾಟದ ಫಲವಾಗಿ ಇಂದು ಎಷ್ಟೋ ವಿದ್ಯಾರ್ಥಿಗಳು ಅವರ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಅಕ್ಷರ ಸಂತ ಹಾಜಬ್ಬರ ಜೀವನವೇ ಪಠ್ಯವಾಗಿವೆ. ಕಳೆದ ವರ್ಷ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದಾರೆ. ಅಲ್ಲದೆ, ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಬಳಿಕ ಅನೇಕ ಸಂಸ್ಥೆಗಳು ಆರ್ಥಿಕ ನೆರವು ನೀಡಿದ್ದು ಇವೆಲ್ಲವನ್ನೂ ಅವರು ಶಾಲೆಯ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ಸಿಎನ್ಎನ್– ಐಬಿಎನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದ್ದವು. ಎಲ್ಲವನ್ನೂ ಶಾಲೆಗಾಗಿಯೇ ಮುಡಿಪಾಗಿಟ್ಟಿದ್ದ ಹಾಜಬ್ಬರು ಹಳೆಯ ಹಂಚಿನ ಮನೆಯಲ್ಲಿ ವಾಸವಾಗಿದ್ದರು. ಪ್ರಶಸ್ತಿ ಫಲಕಗಳು, ಸನ್ಮಾನ ಪತ್ರಗಳು ಮನೆಯ ಮರದ ಕಪಾಟಿನಲ್ಲಿ ಹಿಡಿಯದೆ ಚೀಲದಲ್ಲಿ ತುಂಬಿಸಿ ಇಡಲಾಗಿತ್ತು. ಬಳಿಕ ಆಲ್ಬನ್ ಮಿನೇಜಸ್ ಅವರು ಕೆಲವು ವರ್ಷಗಳ ಹಿಂದೆ ಮನೆಯನ್ನು ನಿರ್ಮಿಸಿಕೊಟ್ಟು, ಅದರ ಚಾವಡಿಯಲ್ಲಿ ಪ್ರಶಸ್ತಿ ಫಲಕ ಇಡಲೆಂದೇ ಜಾಗ ಮೀಸಲಾಗಿಟ್ಟಿದ್ದರು.