ನ್ಯೂಸ್ ನಾಟೌಟ್: ಸುತ್ತಲು ಕಾಡು..ದೈತ್ಯ ಆನೆಗಳು ಹೆಜ್ಜೆ ಇಡುವ ದುರ್ಗಮ ಹಾದಿ. ಆ ಕಾಡಿನೊಳಗೊಂದು ಮನೆ, ಅಲ್ಲೊಂದು ಪುಟ್ಟ ಸಂಸಾರ. ಆ ಸಂಸಾರದಲ್ಲೊಬ್ಬಳು ವಿಶೇಷ ಚೇತನ ಹೆಣ್ಣು ಮಗಳು. ಇದು ಅರಂತೋಡು ಗ್ರಾಮದ ಅರಮನೆ ಗಯಾದ ಮಿನುಂಗೂರಿನ ಪ್ರಾಪ್ತಿ ಗೌಡ ಎಂಬ ಪ್ರತಿಭಾವಂತೆಯ ಕಥೆ.
ಚಿನ್ನಪ್ಪ ಕೆ.ಕೆ, ಲಕ್ಷ್ಮೀ ಎಂ ದಂಪತಿಯ ಪುತ್ರಿ ಪ್ರಾಪ್ತಿ ಗೌಡ. ತಂಗಿಯರಾದ ಧೃತಿ ಕೆ.ಸಿ ಮತ್ತು ದೀಪ್ತಿ ಕೆ.ಸಿ ಅವರೊಂದಿಗೆ ಅರಮನೆಗಯಾದ ಮಿನುಂಗೂರಿನಲ್ಲಿ ವಾಸವಿದ್ದಾರೆ.
ಬಾಲ್ಯದಿಂದಲೂ ಪ್ರಾಪ್ತಿಗೆ ನಡೆಯೋಕೆ ಆಗ್ತಿರಲಿಲ್ಲ. ತಂದೆಯೇ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ದೂರದ ಶಾಲೆಗೆ ಕಳಿಸ್ತಿದ್ರು, ಶಿಕ್ಷಣ ನೀಡಿದ್ರು. ಮುಂದೆ ಮಗಳೇ ಆತ್ಮವಿಶ್ವಾಸದಿಂದ ನಡೆಯುವಂತೆ ಮಾಡಿದ್ರು. ಎಲ್ಲರಂತೆ ನೀನೂ ಬದುಕ್ತಿಯಾ ಎನ್ನುವ ಧೈರ್ಯವನ್ನು ಮನೆಯವರು ತುಂಬಿದ್ರು. ಅಲ್ಲಿಂದ ನಂತರ ಈ ಹೆಣ್ಣು ಮಗಳು ತಿರುಗಿ ನೋಡಿದ್ದೇ ಇಲ್ಲ. ಸುಳ್ಯದ ಎನ್ಎಂಸಿ ಪದವಿ ಪರೀಕ್ಷೆಯಲ್ಲಿ 3ನೇ ಟಾಪರ್ ಆದ್ರು. ಸದ್ಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಡ್ ಮಾಡ್ತಿದ್ದಾರೆ. ಈ ನಡುವೆ ತನ್ನ ಮಾತೃಭಾಷೆ ಅರೆಭಾಷೆ ಕನ್ನಡದಲ್ಲಿ ‘ವಿಮಲಕ್ಕನ ಮೂರು ಪಿಳ್ಳಿಕ’ ಅನ್ನುವ ಶೀರ್ಷಿಕೆಯಡಿ ಲಘ ಬರಹಗಳ ಸಂಕಲನ ಬರೆದಿದ್ದಾರೆ. ಇಡೀ ಪುಸ್ತಕವನ್ನು ಮೊಬೈಲ್ ನಲ್ಲಿಯೇ ಟೈಪ್ ಮಾಡಿ ಈ ಸಾಹಸ ಮಾಡಿದ್ದಾರೆ. ಈ ಕನಸು ಕಂಗಳ ಯುವತಿಯ ವಿಡಿಯೋಗೆ ಲೈಕ್, ಶೇರ್, ಕಾಮೆಂಟ್ ಮೂಲಕ ಬೆಂಬಲ ಸೂಚಿಸಿ. ಇಂಥಹ ನೂರಾರು ವಿಶೇಷ ಚೇತನರ ಪಾಲಿಗೆ ಪ್ರಾಪ್ತಿ ಸ್ಪೂರ್ತಿಯಾಗಲಿ.







