ನ್ಯೂಸ್ ನಾಟೌಟ್: ಮನೆ ನಿರ್ಮಾಣದ ಕಾಮಗಾರಿ ವೇಳೆ ಸಂಭವಿಸಿದ್ದ ಅವಘಡಕ್ಕೆ ಸಂಬಂಧಿಸಿ 10 ವರ್ಷದ ಬಳಿಕ ಸುಳ್ಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಕಾರಣರು ಎನ್ನಲಾಗಿದ್ದ ಮನೆ ಮಾಲೀಕ ಮತ್ತು ಗುತ್ತಿಗೆದಾರ ಖುಲಾಸೆಗೊಂಡಿದ್ದಾರೆ.
ಏನಿದು ಪ್ರಕರಣ..?
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕತ್ಲಡ್ಕ ಎಂಬಲ್ಲಿ ಎಂ. ಎಸ್ ಸತೀಶ್ ಕುಮಾರ್ ಎಂಬವರ ಬಾಪ್ತು ನಿರ್ಮಾಣ ಹಂತದಲ್ಲಿರುವ ಮನೆ ಕಟ್ಟಡದ ಮೊದಲನೇ ಅಂತಸ್ತಿನ ಪ್ರೊಜೆಕ್ಷನ್ ಸ್ಲಾಬ್ ಕಾರ್ಯ ನಡೆದಿತ್ತು. 2016 ಅ.7ರಂದು ಈ ನಿಮಿತ್ತ ಕೆಲಸ ನಡೆಯುತ್ತಿದ್ದ ವೇಳೆ ಒಮ್ಮೆಲೆ ಪ್ರೊಜೆಕ್ಷನ್ ಸ್ಲಾಬ್ ಕುಸಿದು ಬಿದ್ದಿದೆ. ಅದರ ಕೆಳಭಾಗದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ರಾಧಾಕೃಷ್ಣ, ಜಯಂತ, ಮುತ್ತಣ್ಣ ಮತ್ತು ಸಂತೋಷ್ ರವರ ಮೇಲೆ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಗಂಭೀರ ಗಾಯಗೊಂಡಿದ್ದವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಾಧಾಕೃಷ್ಣ ಎಂಬುವವರು ಮೃತಪಟ್ಟಿದ್ದರು. ಈ ದುರ್ಘಟನೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ನಿರ್ಲಕ್ಷತೆ ತೋರಿದ ಪರಿಣಾಮದಿಂದ ದುರಂತ ಸಂಭವಿಸಿದೆ ಎಂದು ದೂರು ದಾಖಲಿಸಲಾಗಿತ್ತು. ಮನೆ ಮಾಲೀಕ ಸತೀಶ್ ಕುಮಾರ್ ಹಾಗೂ ಗುತ್ತಿಗೆದಾರ ಮನೋಜ್ ಪಿ.ಎ ರವರ ಮೇಲೆ ದೂರು ದಾಖಲಾಗಿತ್ತು. ಬೆಳ್ಳಾರೆ ಪೊಲೀಸ್ ಠಾಣೆಯ ಆಗಿನ ಠಾಣಾಧಿಕಾರಿ ಚೆಲುವಯ್ಯರವರು ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 337,338 ಹಾಗೂ 304 ಎ ಅಡಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೊತ್ತಿಕೊಂಡ ಸುಳ್ಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯವು ಸುಮಾರು 11 ಸಾಕ್ಷಿಗಳ ಸಾಕ್ಷಿ ಗಳನ್ನು ಪಡೆದುಕೊಂಡಿದೆ. ಆ ನಂತರ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್ ರವರು ಆರೋಪಿಗಳ ಮೇಲೆ ಮಾಡಲಾದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿದೆ. ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ ಹಾಗೂ ಶಾಮ್ ಪ್ರಸಾದ್ ಎನ್. ಕೆ ವಾದಿಸಿದ್ದರು.













