ನ್ಯೂಸ್ ನಾಟೌಟ್: ನೆರೆ ಮನೆಯನ್ನು ಸುಡುವ ಬೆಂಕಿ ತನ್ನ ಮನೆಯನ್ನೂ ಸುಡಬಲ್ಲದು ಅನ್ನೊ ಅರಿವಿಲ್ಲದ ಕೆಲವು ಕಿಡಿಗೇಡಿಗಳು ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡಿಯೇ ಮಜಾ ತಗೊಳ್ಳುತ್ತಿರುತ್ತಾರೆ. ಇಂಥಹವರನ್ನು ವಿಘ್ನ ಸಂತೋಷಿಗಳೆಂದು ಕರೆಯುವುದುಂಟು. ಈ ವಿಘ್ನಿಗಳಿಗೆ ದಿ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕಲ್ಲುಗುಂಡಿಯಿಂದ ಗೂನಡ್ಕದವರೆಗಿನ ಪರಿಸರ.
ಕಲ್ಲುಗುಂಡಿಯಿಂದ ಗೂನಡ್ಕದವರೆಗಿನ ಪರಿಸರ ಈಗ ಮೊದಲಿನಂತಿಲ್ಲ. ದಾರಿ ಮಧ್ಯದಲ್ಲಿ ಮರ ಗಿಡಗಳು ಕರೆಂಟ್ ಕಂಬಗಳ ಸಮೀಪದಲ್ಲೇ ಹಾದು ಹೋಗುತ್ತಿರುವ ಇಂಟರ್ ನೆಟ್ ಕೇಬಲ್ ಮತ್ತು ಟೀವಿ ಕೇಬಲ್ ಗಳು ಈಗ ಕಿಡಿಗೇಡಿಗಳ ಕುಕೃತ್ಯಕ್ಕೆ ಬಲಿಯಾಗುತ್ತಿವೆ. ರಾತ್ರಿಯಾದರೆ ಸಾಕು ಇದ್ದಕ್ಕಿದ್ದಂತೆ ಇಂಟರ್ ನೆಟ್ ಕೇಬಲ್ ಮತ್ತು ಟೀವಿ ಕೇಬಲ್ ಗಳು ತುಂಡಾಗುತ್ತಿವೆ. ಇದರಿಂದ ಗ್ರಾಹಕರು ಸಿಟ್ಟಿಗೆದ್ದು ಕಲ್ಲುಗುಂಡಿಯ ಶ್ರೀದೇವಿ ಇನ್ಫೋಟೆಕ್ ಟಿವಿ ಮತ್ತು ಇಂಟರ್ ನೆಟ್ ಸಂಸ್ಥೆಯ ಮಾಲೀಕರಿಗೆ ಕರೆ ಮಾಡಿ ಚೆನ್ನಾಗಿ ಬೈದು ಫೋನ್ ಕುಕ್ಕುತ್ತಾರೆ. ಇತ್ತ ವಿಚಾರ ಪರಾಮರ್ಶಿಸಿದಾಗ ಮಾಲೀಕರಿಗೆ ಗೊತ್ತಾಗಿದ್ದು ತನ್ನ ಕೇಬಲ್ ಅನ್ನು ಕತ್ತಲಾಗುವುದನ್ನೇ ಕಾದು ಯಾರೋ ಅಪರಿಚಿತರು ಕಟ್ ಮಾಡುತ್ತಿದ್ದಾರೆ ಅನ್ನುವುದು. ಒಂದೇ ಸಂಸ್ಥೆಗೆ ಸೇರಿದ ಕೇಬಲ್ ಗಳೇ ನಿತ್ಯ ತುಂಡಾಗುತ್ತಿರುವುದು ಈಗ ಅನುಮಾನಕ್ಕೆ ಕಾರಣವಾಗುತ್ತಿದೆ. ಯಾರೋ ಕಿಡಿಗೇಡಿಗಳು ಬೇಕೆಂದೇ ವೃತ್ತಿಪರ ಮತ್ಸರದಿಂದ ಕೇಬಲ್ ವೈರ್ ಗಳನ್ನು ತುಂಡರಿಸುತ್ತಿದ್ದಾರೆ ಅನ್ನುವ ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ.













