ನ್ಯೂಸ್ ನಾಟೌಟ್ : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು ದಂಪತಿ ಸಾವಿಗೆ ಶರಣಾಗಿದ್ದಾರೆ. ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವಿನ ಪ್ರಾಣ ತೆಗೆಯಲು ಯತ್ನಿಸಿದ್ದು, ಮಗು ಪ್ರಜ್ಞೆ ತಪ್ಪಿದಾಗ ಅವರು ನೇಣು ಬಿಗಿದುಕೊಂಡಿದ್ದಾರೆ. ಅದೃಷ್ಟವಶಾತ್, ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಮೂಲದ ದರ್ಶನ್ ಮತ್ತು ದಿವ್ಯಶ್ರೀ ಮೃತಪಟ್ಟ ದಂಪತಿಗಳು. ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಸುಂದರವಾದ ಬದುಕು ಕಟ್ಟಿಕೊಳ್ಳಬೇಕಿದ್ದ ಈ ದಂಪತಿಗಳ ನಡುವೆ ಇತ್ತೀಚೆಗೆ ಸಣ್ಣಪುಟ್ಟ ಕೌಟುಂಬಿಕ ವಿಚಾರವಾಗಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ.
ಇಂದು ಬೆಳಿಗ್ಗೆ ಇಬ್ಬರ ನಡುವೆ ಕಲಹ ವಿಕೋಪಕ್ಕೆ ಹೋಗಿದ್ದು, ಮನನೊಂದ ದಂಪತಿಗಳು ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ತಾವು ಈ ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನೂ ಜೊತೆಗೆ ಕರೆದೊಯ್ಯಲು ನಿರ್ಧರಿಸಿದ ದಂಪತಿಗಳು, ಮಗುವಿನ ಕತ್ತು ಹಿಸುಕಿ ಪ್ರಾಣ ತೆಗೆಯಲು ಯತ್ನಿಸಿದ್ದಾರೆ. ಮಗು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದಾಗ, ಮಗು ಸಾವನ್ನಪ್ಪಿದೆ ಎಂದು ಭಾವಿಸಿದ ಪೋಷಕರು ನಂತರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.













