ನ್ಯೂಸ್ ನಾಟೌಟ್: ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 255 ರನ್ಗಳು.
256 ರನ್ಗಳ ಕಠಿಣ ಗುರಿ ಪಡೆದ ನ್ಯೂಝಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಭರ್ಜರಿ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಆ ದಾಖಲೆಗಳಾವುವು ಎಂದು ನೋಡುವುದಾದರೆ….
ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. 2007, 2024 ರಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಈ ಸಾಧನೆ ಮಾಡಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ತವರಿನಲ್ಲಿ ಯಾವುದೇ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರಲಿಲ್ಲ. ಆದರೆ ಈ ಬಾರಿ ತವರು ಮೈದಾನಗಳಲ್ಲಿ ಪ್ರಚಂಡ ಪ್ರದರ್ಶನ ನೀಡಿರುವ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟಿ20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಟೀಮ್ ಇಂಡಿಯಾ ಪಾತ್ರವಾಗಿದೆ. ಅಂದರೆ 2024 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಇದೀಗ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
ಫೈನಲ್ ಮ್ಯಾಚ್ಗೂ ಮುನ್ನ ನನ್ನ ಸಹೋದರಿ ತೀರಿಕೊಂಡಿದ್ದಾರೆ. ಅವಳಿಗೆ ನಾನು ವಿಶ್ವಕಪ್ ಗೆಲ್ಲಬೇಕೆಂಬ ತುಂಬಾ ಆಸೆಯಿತ್ತು. ಆದರೆ ಇದೀಗ ಅವಳಿಲ್ಲ. ಈ ವಿಶ್ವಕಪ್ ನಾನು ಅವಳಿಗಾಗಿ ಅರ್ಪಿಸುತ್ತೇನೆ ಎಂದು ಇಶಾನ್ ಕಿಶನ್ ಸಂತಸದ ಕ್ಷಣಗಳ ನಡುವೆ ನೋವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು,
ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಈ ದಂಪತಿಯ ಆರು ತಿಂಗಳು ಮತ್ತು ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಟುಂಬದಲ್ಲಿ ಇಂತಹ ದೊಡ್ಡ ದುರಂತ ಸಂಭವಿಸಿದರೂ, ಇಶಾನ್ ಕಿಶನ್ ತಂಡದ ಹಿತದೃಷ್ಟಿಯಿಂದ ಫೈನಲ್ ಪಂದ್ಯವನ್ನು ಆಡಲು ನಿರ್ಧರಿಸಿದರು. ತಮ್ಮ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರು ನೀಡಿದ ಧೈರ್ಯದಿಂದಾಗಿ ಅವರು ಮೈದಾನಕ್ಕಿಳಿದರು.
ವೈಯಕ್ತಿಕ ದುಃಖದ ನಡುವೆಯೂ ಇಶಾನ್ ಕಿಶನ್ ಸ್ಫೋಟಕವಾಗಿ ಬ್ಯಾಟ್ ಬೀಸಿ 25 ಎಸೆತಗಳಲ್ಲಿ 54 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅಲ್ಲದೆ ಫೀಲ್ಡಿಂಗ್‌ನಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದರು. ಈ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.













