ನ್ಯೂಸ್ ನಾಟೌಟ್ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ – 2026ನ್ನು ನೆಹರೂ ಮೆಮೋರಿಯಲ್ ಕಾಲೇಜಿನ ಕೆ.ವಿ.ಜಿ. ಷಷ್ಯಬ್ಬ ವೇದಿಕೆಯಲ್ಲಿ ಮಂಗಳವಾರ (ಫೆ. 24 ) ಉದ್ಘಾಟಿಸಲಾಯಿತು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎ.ಒ.ಎಲ್.ಇ. (ರಿ.) ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು ಅತ್ಯಂತ ಅಗತ್ಯವಾಗಿದೆ. ಭಾಷೆಯ ಸೊಗಡು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಈ ರೀತಿಯ ಕಾರ್ಯಕ್ರಮಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅರೆಭಾಷೆಯ ಸಂರಕ್ಷಣೆ ಹಾಗೂ ಅದರ ಸಾಹಿತ್ಯಿಕ ಬೆಳವಣಿಗೆಗೆ ನಿರಂತರ ಪ್ರಯತ್ನ ಅಗತ್ಯ. ಅರೆಭಾಷೆಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಸುವಲ್ಲಿ ಅರೆಭಾಷೆ ಅಕಾಡೆಮಿಯ ಪ್ರಯತ್ನಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎ.ಒ.ಎಲ್.ಇ. (ರಿ.) ಸುಳ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಂಚಾಲಕ ಚಂದ್ರಶೇಖರ್ ಪೇರಾಲು, ಸದಸ್ಯರಾದ ಎನ್.ಎ ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ, ಪ್ರಕಾಶ್ ಕುಡ್ಪಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕೆ.ಟಿ ವಿಶ್ವನಾಥ್, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ.,ಹಾಗೂ ನೆಹರೂ ಮೆಮೋರಿಯಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಮಿಥಾಲಿ ಪಿ. ರೈ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಭಾಷಾ ವಿಚಾರ ಸಂಕಿರಣದ ಉದ್ಘಾಟಿಸಲಾಯಿತು. ವಿಚಾರ ಸಂಕಿರಣದಲ್ಲಿ ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಲಿರುವ ಸಂಪನ್ಮೂಲ ವ್ಯಕ್ತಿ, ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ, ಹಿರಿಯ ಚಿಂತಕರು ಹಾಗೂ ಸಾಹಿತಿಗಳು ರಾಧಾಕೃಷ್ಣ ಕೆ.ಇ, ಕೆ. ಆರ್ ಗಂಗಾಧರ್, ಡಾ ಪುರುಷೋತ್ತಮ ಕರಂಗಲ್ಲು, ಪಟ್ಟಡ ಶಿವಕುಮಾರ್, ದೊಡ್ಡಣ್ಣ ಬರಮೇಲು, ಜಯಪ್ರಕಾಶ್ ಕುಕ್ಕೆಟ್ಟಿ, ಡಾ ಕರುಣಾಕರ ನಿಡಿಂಜಿ, ಡಾ ದಯಾನಂದ ಕೂಡಕಂಡಿ ಇವರಿಂದ ವಿವಿಧ ವಿಚಾರಗಳ ಕುರಿತು ಉಪನ್ಯಾಸ ನಡೆಯಲಿದೆ.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಪೆರಾಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರು ಡಾ ಅನುರಾಧ ಕುರುಂಜಿ ಹಾಗೂ ಕಾರ್ಯಕ್ರಮ ನಿರೂಪಿಸಿದರು, ಡಾ ರುದ್ರ ಕುಮಾರ್ ಎಂ. ಎಂ ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸರ್ವ ಸದಸ್ಯರು, ಸಾಹಿತಿಗಳು, ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಲಿರುವ ಸಂಪನ್ಮೂಲ ವ್ಯಕ್ತಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.













