ನ್ಯೂಸ್ ನಾಟೌಟ್: ಒಂದು ನಿರ್ಲಕ್ಷ್ಯಕ್ಕೆ ಹಲವು ಜೀವಗಳು ಬಲಿಯಾಗುವ ಸ್ಥಿತಿ ನಿರ್ಮಾಣವಾಗಬಹುದು. ಜನಪ್ರತಿನಿಧಿಗಳ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ತನಕ್ಕೆ ಸಾಕ್ಷಿಯಾಗಿದೆ ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆ. ಈ ಸೇತುವೆಗೆ ತಡೆಗೋಡೆ ಇಲ್ಲದಿರುವುದೇ ಹೆಚ್ಚಿನ ಅವಘಡಕ್ಕೆ ಕಾರಣವಾಗಿದೆ.
ಫೆ.14ರಂದು ಸ್ಕೂಟಿ ಸಹಿತ ಬಿದ್ದ ಸ್ಕೂಟಿ ಸವಾರ ರವಿ ಚಂದ್ರ ನಾಯ್ಕ್ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಜಾಗದಲ್ಲಿ ಆಟೋ ರಿಕ್ಷಾವೊಂದು ಪಲ್ಟಿಯಾಗಿತ್ತು. ನಿರಂತರವಾಗಿ ಇಲ್ಲಿ ಅವಘಡ ಆಗುತ್ತಿದ್ದರೂ ಯಾರೊಬ್ಬರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಲವು ಸಲ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದರಿಂದ ಮತ್ತಷ್ಟು ಅವಘಡಗಳಿಗೆ ಆಹ್ವಾನ ನೀಡಿದಂತಾಗಿದೆ. ಅಮಾಯಕ ಜೀವ ಬಲಿಯಾಗುವುದಕ್ಕೂ ಮೊದಲು ಎಚ್ಚತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.













