ನ್ಯೂಸ್ ನಾಟೌಟ್ : 6 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿಚಾರಕ್ಕೆ ಜಗಳ ತೆಗೆದು, ಹೆತ್ತ ತಂದೆಯನ್ನೇ ಇಬ್ಬರು ಮಕ್ಕಳು ಕೊ*ಗೈದಿರುವ ಕ್ರೂರ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ನಡೆದಿದೆ.
ಬಿಎಂಟಿಸಿ ನಿವೃತ್ತ ಕಂಡಕ್ಟರ್ ಆಗಿದ್ದ ಮುನಿಕೃಷ್ಣ ಅವರೇ ಮಕ್ಕಳ ಕೈಯಲ್ಲಿ ಕೊ* ಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಹಿರಿಯ ಮಗ ಮೋಹನ್ ಕುಮಾರ್‌ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ಎರಡನೇ ಮಗ ಗಜೇಂದ್ರ ತಲೆಮರೆಸಿಕೊಂಡಿದ್ದಾನೆ.
ಘಟನೆಯ ವಿವರ:
ಮೃತ ಮುನಿಕೃಷ್ಣ ಅವರು ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾಗಿದ್ದರು. ಇವರು ದೂಪನಹಳ್ಳಿಯಲ್ಲಿ ಸುಮಾರು 6 ಕೋಟಿ ಮೌಲ್ಯದ ಮೂರು ಕಟ್ಟಡಗಳನ್ನು (Buildings) ಹೊಂದಿದ್ದರು. ಈ ಆಸ್ತಿಯನ್ನು ಅವರು ತಮ್ಮ ಸ್ವಂತ ಮಕ್ಕಳ ಹೆಸರಿಗೆ ಬರೆಯದೆ, ಮೊಮ್ಮಕ್ಕಳು ಮತ್ತು ತಮ್ಮ ಅಣ್ಣನ ಮಕ್ಕಳ ಹೆಸರಿಗೆ ‘ವಿಲ್’ (Will) ಮಾಡಿದ್ದರು. ಮೂರು ಕಟ್ಟಡಗಳ ಪೈಕಿ ಒಂದನ್ನು ಅಣ್ಣನ ಮಕ್ಕಳ ಹೆಸರಿಗೆ ಬರೆದಿದ್ದರು.
ಆಸ್ತಿಗಾಗಿ ರಂಪಾಟ
‘ನೀನು ಸಂಪಾದಿಸಿ, ನಿನ್ನ ಅಣ್ಣನ ಮಕ್ಕಳ ಹೆಸರಿಗೆ ಯಾಕೆ ವಿಲ್ ಮಾಡಿದೆ? ಎಂದು ಮಕ್ಕಳಾದ ಮೋಹನ್ ಮತ್ತು ಗಜೇಂದ್ರ ತಂದೆಯ ಜೊತೆ ನಿರಂತರವಾಗಿ ಜಗಳವಾಡುತ್ತಿದ್ದರು. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯುವಂತೆ ಒತ್ತಾಯಿಸುತ್ತಿದ್ದರು. ಇದೇ ವಿಚಾರವಾಗಿ ತಂದೆ ಮತ್ತು ಮಕ್ಕಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ.
ಈ ವೇಳೆ ಮಕ್ಕಳಿಬ್ಬರು ಸೇರಿ ತಂದೆಯ ಮೇಲೆ ಕಬ್ಬಿಣದ ರಾಡ್ ಮತ್ತು ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ. ಆಗ ಮಕ್ಕಳನ್ನು ಬೆದರಿಸುವ ಉದ್ದೇಶದಿಂದ ಮುನಿಕೃಷ್ಣ ಮನೆಯಲ್ಲಿದ್ದ ಚಾಕು ತಂದಿದ್ದಾರೆ. ಆದರೆ, ರೊಚ್ಚಿಗೆದ್ದ ಮಗ ಮೋಹನ್, ತಂದೆಯ ಕೈಯಲ್ಲಿದ್ದ ಚಾಕುವನ್ನೇ ಕಸಿದುಕೊಂಡು ಅವರಿಗೇ ಇರಿದು ಕೊಲೆ ಮಾಡಿದ್ದಾನೆ.
ಓರ್ವ ಅರೆಸ್ಟ್, ಮತ್ತೊಬ್ಬ ಪರಾರಿ
ಘಟನೆ ಸಂಬಂಧ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿ ಹಿರಿಯ ಮಗ ಮೋಹನ್ ಕುಮಾರ್‌ನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಎರಡನೇ ಮಗ ಗಜೇಂದ್ರನಿಗಾಗಿ ಬಲೆ ಬೀಸಿದ್ದಾರೆ.













