ನ್ಯೂಸ್ ನಾಟೌಟ್: ಕೆ.ಸಿ ವರ್ಗೀಸ್ (73 ವರ್ಷ) ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಹೆಂಡತಿಗೆ ಹೊಡೆದ ವೃದ್ದನನ್ನು ಹೆದರಿಸಲು ಹೋದ ಮೂವರು ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ವರ್ಗೀಸ್ ಕೊಲೆ ಪ್ರಕರಣದ ಹಿಂದಿನ ಆರೋಪಿಗಳು ಯಾರಿರಬಹುದು ಎನ್ನುವುದರ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಫೆ.9 ರಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದು ಸಹಜ ಸಾವು ಆಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು. ಬಳಿಕ ಕೊಲೆ ಕೇಸಿನ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ದಿನಾಂಕ 09.02.2026 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುಡಿಆರ್ 07/2026, ಕಲಂ 194 (III)(IV) BNSS 2023 ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆ.ಸಿ ವರ್ಗೀಸ್ ಮೃತ ವ್ಯಕ್ತಿಯ ತಲೆಗೆ ಉಂಟಾದ ಗಂಭೀರ ಹಲ್ಲೆಯಿಂದಾಗಿ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯದಿಂದಾಗಿ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಬಂದಿದೆ.
ಮೃತ ಕೆ.ಸಿ ವರ್ಗಿಸ್ ತನ್ನ ಹೆಂಡತಿಗೆ ಹೊಡೆದಿದ್ದಾರೆ. ಇದನ್ನು ನೋಡಿದ ಒಬ್ಬ ವ್ಯಕ್ತಿ ಈ ಬಗ್ಗೆ ಆಕೆಯ ಮಗ ಕೆ.ವಿ ತೋಮಸ್ ಗೆ ತಿಳಿಸಿದ್ದಾನೆ. ಮಗನು ತನಗೆ ಪರಿಚಯದ ಒಬ್ಬ ಆಟೋ ರಿಕ್ಷಾದವರನ್ನು ಬರಮಾಡಿ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಆಗ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕಾಲ್ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದಾನೆ. ಹಾಗೆ ಬಂದು ಥಾಮಸ್ ಗೆ ಕರೆ ಮಾಡಿ ಸದ್ರಿ ವ್ಯಕ್ತಿಗೆ ಹೆದರಿಸಬೇಕೆಂದು ಚರ್ಚೆ ಮಾಡಿ ಥಾಮಸ್ ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೊಚ್ಚ ಮತ್ತು ರಾಜುರವರು ಒಳಗೆ ಹೋಗಿ ಮೃತ ಕೆ.ಸಿ ವರ್ಗಿಸ್ ರವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ.
ಬಳಿಕ ಹೊರಗೆ ಬಂದು ಥಾಮಸ್ ರವರಲ್ಲಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಹೋಗಿ ಥಾಮಸ್ ನು ತನ್ನ ತಂದೆಯು ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಪೆಟ್ಟಾಗಿ ಮೃತರಾಗಿರಬಹುದಾಗಿ ಇದೊಂದು ಆಸ್ವಾಭಾವಿಕ ಪ್ರಕರಣವೆಂದು ತಿಳಿಸಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸಿ ಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51) ಎಂಬವರನ್ನು ಬಂಧಿಸಲಾಗಿದೆ.













